ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್

ಸ್ವಾತಂತ್ರ್ಯ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಿ: ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್  Celebrate Independence Day meaningfully: Collector C.N. Shridhar

ಲೋಕದರ್ಶನ ವರದಿ

ಗದಗ 28: ಆಗಸ್ಟ್‌ 15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬದ ಘನತೆಗೆ ತಕ್ಕಂತೆ ಶಿಸ್ತುಬದ್ಧವಾಗಿ, ಅರ್ಥಪೂರ್ಣವಾಗಿ ಹಾಗೂ ಅದ್ದೂರಿಯಾಗಿ ಆಚರಿಸಲು ಅಗತ್ಯವಿರುವ ಎಲ್ಲ ಸಿದ್ಧತೆಗಳನ್ನು ವಿವಿಧ ಇಲಾಖೆಗಳು ಸಮನ್ವಯದಿಂದ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಅಧಿಕಾರಿಗಳಿಗೆ ಸೂಚಿಸಿದರು.  

ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  

ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರದ ಗೌರವ ಮತ್ತು ಹೆಮ್ಮೆಯ ಸಂಕೇತವಾಗಿದ್ದು, ಕಾರ್ಯಕ್ರಮದ ಪ್ರತಿಯೊಂದು ಹಂತದಲ್ಲೂ ಸರ್ಕಾರದ ಶಿಷ್ಟಾಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆಹ್ವಾನ ಪತ್ರಿಕೆಗಳ ಮುದ್ರಣ, ವಿತರಣೆ, ಅತಿಥಿಗಳ ಆಸನ ವ್ಯವಸ್ಥೆ, ವೇದಿಕೆ ಸಿದ್ಧತೆ ಸೇರಿದಂತೆ ಎಲ್ಲ ವ್ಯವಸ್ಥೆಗಳನ್ನು ಯಾವುದೇ ಲೋಪವಾಗದಂತೆ ಸಮರ​‍್ಕವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.  

ರಾಜ್ಯ ಸರ್ಕಾರದ ಶಿಷ್ಟಾಚಾರ ನಿಯಮಾವಳಿಯಂತೆ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು, ಹಿರಿಯ ನಾಗರಿಕರು, ವಿವಿಧ ಕ್ಷೇತ್ರಗಳ ಗಣ್ಯರು, ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಸಕಾಲದಲ್ಲಿ ಆಹ್ವಾನ ನೀಡಬೇಕು. ಯಾವುದೇ ಅರ್ಹ ವ್ಯಕ್ತಿ ಆಹ್ವಾನದಿಂದ ವಂಚಿತರಾಗದಂತೆ ಸಂಬಂಧಿತ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಸೂಚಿಸಿದರು.  

ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಧ್ವಜಾರೋಹಣ, ಗೌರವ ವಂದನೆ, ಪಥಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಸಾರ್ವಜನಿಕರ ಆಸನ ವ್ಯವಸ್ಥೆ ಸೇರಿದಂತೆ ಎಲ್ಲ ಸಿದ್ಧತೆಗಳನ್ನು ಮುಂಚಿತವಾಗಿ ಪರೀಶೀಲಿಸಬೇಕು. ಕುಡಿಯುವ ನೀರು, ಶೌಚಾಲಯ, ವೈದ್ಯಕೀಯ ನೆರವು, ಅಗ್ನಿಶಾಮಕ ವ್ಯವಸ್ಥೆ, ತುರ್ತು ನಿರ್ಗಮನ ವ್ಯವಸ್ಥೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಮರ​‍್ಕವಾಗಿ ಕಲ್ಪಿಸುವಂತೆ ಸಂಬಂಧಿತ ಇಲಾಖೆಗಳಿಗೆ ನಿರ್ದೇಶನ ನೀಡಿದರು.  

ನಗರದ ಪ್ರಮುಖ ವೃತ್ತಗಳು, ಸರ್ಕಾರಿ ಕಚೇರಿಗಳು, ರಾಷ್ಟ್ರೀಯ ನಾಯಕರ ಪ್ರತಿಮೆಗಳಿರುವ ಸ್ಥಳಗಳು ಹಾಗೂ ಕಾರ್ಯಕ್ರಮ ನಡೆಯುವ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ರಮುಖ ರಸ್ತೆಗಳಲ್ಲಿ ಸ್ವಚ್ಛತೆ, ಹಸಿರು ನಿರ್ವಹಣೆ ಹಾಗೂ ಅಲಂಕಾರ ಕಾರ್ಯಗಳನ್ನು ಕೈಗೊಂಡು ರಾಷ್ಟ್ರೀಯ ಹಬ್ಬಕ್ಕೆ ತಕ್ಕ ವಾತಾವರಣ ನಿರ್ಮಿಸಬೇಕು ಎಂದು ನಗರಸಭೆ ಹಾಗೂ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಿದರು.  

ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು, ಎನ್ಸಿಸಿ, ಎನ್‌ಎಸ್‌ಎಸ್, ಸ್ಕೌಟ್ಸ್‌ ಮತ್ತು ಗೈಡ್ಸ್‌, ಪೊಲೀಸ್ ಹಾಗೂ ಇತರೆ ತಂಡಗಳ ಪಥಸಂಚಲನದ ಪೂರ್ವಾಭ್ಯಾಸವನ್ನು ನಿಗದಿತ ವೇಳಾಪಟ್ಟಿಯಂತೆ ನಡೆಸಬೇಕು. ಎಲ್ಲ ತಂಡಗಳು ಸಮಯಪ್ರಜ್ಞೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕ್ರಮ ಕೈಗೊಳ್ಳಬೇಕು ಎಂದರು.  

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸಂಜೆ ವೇಳೆ ಜಿಲ್ಲೆಯ ವಿವಿಧ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರಿಂದ ದೇಶಭಕ್ತಿ, ರಾಷ್ಟ್ರೀಯ ಏಕತೆ, ಕನ್ನಡ ನಾಡಿನ ಸಾಂಸ್ಕೃತಿಕ ವೈಭವ ಬಿಂಬಿಸುವ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಸಾರ್ವಜನಿಕರಲ್ಲಿ ದೇಶಭಕ್ತಿ ಮತ್ತು ರಾಷ್ಟ್ರೇ​‍್ರಮ ಮೂಡಿಸುವಂತಿರಬೇಕು ಎಂದು ತಿಳಿಸಿದರು.  

ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಹೆಸ್ಕಾಂ ಅಧಿಕಾರಿಗಳು ವಿಶೇಷ ನಿಗಾ ವಹಿಸಬೇಕು. ನಿರಂತರ ವಿದ್ಯುತ್ ಪೂರೈಕೆಯೊಂದಿಗೆ ಪರ್ಯಾಯ ವ್ಯವಸ್ಥೆ, ಜನರೇಟರ್ ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ನಿಯೋಜಿಸಬೇಕು. ಧ್ವನಿವರ್ಧಕ, ಬೆಳಕು ಹಾಗೂ ಇತರೆ ವಿದ್ಯುತ್ ಉಪಕರಣಗಳನ್ನು ಕಾರ್ಯಕ್ರಮಕ್ಕೂ ಮುನ್ನ ಪರೀಶೀಲಿಸಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.  

ಪೊಲೀಸ್ ಇಲಾಖೆ ಭದ್ರತೆ, ಸಂಚಾರ ನಿಯಂತ್ರಣ ಹಾಗೂ ವಾಹನ ನಿಲುಗಡೆ ವ್ಯವಸ್ಥೆಯನ್ನು ಸಮರ​‍್ಕವಾಗಿ ನಿರ್ವಹಿಸಬೇಕು. ಆರೋಗ್ಯ ಇಲಾಖೆ ವೈದ್ಯಕೀಯ ತಂಡ ಹಾಗೂ ಆಂಬುಲೆನ್ಸ್‌ ವ್ಯವಸ್ಥೆಯನ್ನು ಸಿದ್ಧವಾಗಿರಿಸಬೇಕು. ಅಗ್ನಿಶಾಮಕ ಇಲಾಖೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ರಾಷ್ಟ್ರೀಯ ಹಬ್ಬವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕರೆ ನೀಡಿದರು.  

ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸ್ವಾತಂತ್ರ್ಯ ದಿನಾಚರಣೆಗೆ ಸಂಬಂಧಿಸಿದಂತೆ ತಮ್ಮ ಇಲಾಖೆಗಳ ಸಿದ್ಧತೆ ಕುರಿತು ಮಾಹಿತಿ ನೀಡಿದರು ಹಾಗೂ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.  

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್‌., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಡಿವೈಎಸ್ಪಿ ವಿದ್ಯಾನಂದ ನಾಯಕ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೋಟೂರ, ವಿವಿಧ ಇಲಾಖೆಗಳ ಉಪನಿರ್ದೇಶಕರು, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.