‘ದೇವಭೂಮಿ ಭಾರತದ ಮಣ್ಣಿನ ಘನತೆ ಅಪ್ರತಿಮ’

 ‘ದೇವಭೂಮಿ ಭಾರತದ ಮಣ್ಣಿನ ಘನತೆ ಅಪ್ರತಿಮ’ 'The dignity of the soil of Devbhoomi India is unparalleled'

       ಧಾರವಾಡ 11:  ಅನೇಕ ಆಚಾರ್ಯರು, ಶಿವಯೋಗಿಗಳು, ಸಂತರು, ಮಹಾಂತರು, ಮಹಾತ್ಮರು, ಅವಧೂತರು ಜನಿಸಿ ತಪಗೈದು ತಮ್ಮ ಶಕ್ತಿಯನ್ನು ಸಿಂಚನಗೈದ ದೇವಭೂಮಿ ಭಾರತದ ಮಣ್ಣಿನ ಘನತೆ ಅಪ್ರತಿಮವಾಗಿದೆ ಎಂದು ಹಿರಿಯ ಪತ್ರಕರ್ತ, ಲೇಖಕ ಡಾ. ಗುರುಮೂರ್ತಿ ಯರಗಂಬಳಿಮಠ ಹೇಳಿದರು.  

ಅವರು ತಾಲೂಕಿನ ಅಮ್ಮಿನಬಾವಿ ಗ್ರಾಮದ ಶ್ರೀಸಂಸ್ಥಾನ ಪಂಚಗೃಹ ಹಿರೇಮಠದ ಆವರಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಹಿಂದೂ ಸಮ್ಮೇಳನದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಮುಕ್ತ ಮನಸ್ಥಿತಿಯಲ್ಲಿ ಸತ್ಯದ ಅನುಸಂಧಾನ ಹಾಗೂ ಅಹಿಂಸೆಯ ಅನುಪಾಲನೆ ಮಾಡಿ, ವಿಶ್ವ ಕುಟುಂಬದ ಭಾವಸಿಂಚನದಲ್ಲಿ ಉತ್ಕೃಷ್ಟ ಜೀವನ ವಿಧಾನ ಹೊಂದಿ ಆತ್ಮಜ್ಞಾನ ಸಂಪಾದನೆಗೆ ತೆರೆದುಕೊಂಡಾಗ ನಮ್ಮ ರಾಷ್ಟ್ರದ ಎಲ್ಲ ಕ್ಷೇತ್ರಗಳು ಮತ್ತು ಅಲ್ಲಿಯ ಜನಮನಗಳು ನಮಗೆ ಬಹುಬೇಗ ಅರ್ಥವಾಗುತ್ತವೆ. ಮನುಕುಲವೂ ಸೇರಿದಂತೆ ಎಲ್ಲ ಜೀವಸಂಕುಲದಲ್ಲಿ ಇರುವ ದೈವತ್ವದ ಚೈತನ್ಯವನ್ನು ಗುರುತಿಸಿ, ಆ ಮೂಲಕ ಧರ್ಮದ ಸಿದ್ಧಾಂತಗಳನ್ನು ಅಥೈಸಿಕೊಂಡಾಗ ಸಂಘರ್ಷವಳಿದು ರಾಷ್ಟ್ರವ್ಯಾಪಿಯಾಗಿ ಸಮನ್ವಯ ಅಂಕುರಿಸಲು ಸಾಧ್ಯವಾಗುತ್ತದೆ ಎಂದರು.  

ಮುಖ್ಯ ಅತಿಥಿಯಾಗಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ಪ್ರಜ್ಞಾ ಪ್ರವಾಹದ ಸಹ ಸಂಯೋಜಕ ರಘುನಂದನ ಮಾತನಾಡಿ, ಭಾರತೀಯರಾಗಿ ಭಾರತವನ್ನು ಪ್ರೀತಿಸುವ ಜೊತೆಗೆ ರಾಷ್ಟ್ರಕ್ಕಾಗಿ ಸಮರೆ​‍್ಣ ಮಾಡುವ ಮನೋಭಾವದೊಂದಿಗೆೆ ಎಲ್ಲರಲ್ಲೂ ದೇಶ ಸೇವೆಯ ಚಿಂತನೆ ಇರಬೇಕಾಗುತ್ತದೆ. ದೇಶ ಸೇವೆ ನಮ್ಮ ಗ್ರಾಮದಿಂದಲೇ ಆರಂಭಗೊಳ್ಳಬೇಕು. ಗುಟಕಾ, ಸಾರಾಯಿ, ಪ್ಲಾಸ್ಟಿಕ್, ರಾಸಾಯನಿಕ ಹಾಗೂ ಕೊಳಚೆ ಮುಕ್ತ ಗ್ರಾಮ ನಿರ್ಮಾಣವೂ ಸಹ ದೇಶಸೇವೆಯೇ ಆಗಿದ್ದು, ಇದನ್ನು ಕೂಡಲೇ ಯುವ ಸಮೂಹ ಆರಂಭಿಸಬೇಕು ಎಂದರು.  

           ಸಂಸ್ಕೃತಿ-ಸಂಸ್ಕಾರ : ದೇಶವೇ ದೊಡ್ಡದು, ದೇಶವೇ ಮೊದಲು ಎಂಬ ಮನೋಭೂಮಿಕೆಯಲ್ಲಿ ದೇಶದ ಘನತೆಯನ್ನು ಎತ್ತಿ ಹಿಡಿದು ಬದಲಾವಣೆಗೆ ತೆರೆದುಕೊಳ್ಳಬೇಕು. ಹಿರಿಯರಾದವರು ತಮ್ಮ ಕುಟುಂಬದ ಎಲ್ಲಾ ಸದಸ್ಯರಿಗೆ ನಮ್ಮ ರಾಷ್ಟ್ರದ ಸನಾತನ ಹಿಂದೂ ಸಂಸ್ಕೃತಿ-ಸಂಸ್ಕಾರಗಳನ್ನು ನೀಡಿ ಹಿಂದುತ್ವದ ಜಾಗೃತಿ ಮಾಡಲು ಕೈಜೋಡಿಸಬೇಕು ಎಂದೂ ರಘುನಂದನ ನುಡಿದರು.  

ಶಿವಾನಂದ ತಡಕೋಡ ಹಾಗೂ ನವೀನ ಪದಕಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ವಸಂತ ಪದಕಿ, ಯಲ್ಲಪ್ಪ ಜಾಮನೂನವರ, ಮಹಾಂತೇಶ ಹುಲ್ಲೂರ, ಮೌನೇಶ ಪತ್ತಾರ, ಕಿರಣ ಜಾಧವ, ಚಂದ್ರು ಶೆಟ್ಟರ, ರಾಮಚಂದ್ರ ದೇಶಪಾಂಡೆ, ಲಿಂಗರಾಜ ಮುಂದಿನಮನಿ, ಬಸವರಾಜ ಸವದತ್ತಿ, ಶಾಂತಿನಾಥ ಲೋಕೂರ, ಶ್ರೀನಿವಾಸ ಭೋವಿ, ಈರಣ್ಣ ಪಾಟೀಲ ಗಣಾಚಾರಿ, ಚೆನ್ನಬಸಮ್ಮ ಕುಸೂಗಲ್ಲ, ಕಾವೇರಿ ಹೂಗಾರ ಇದ್ದರು. 

         ಇದಕ್ಕೂ ಮೊದಲು ನಡೆದ ದೇಶಭಕ್ತರ ಭಾವಚಿತ್ರಗಳ ಚಕ್ಕಡಿ ಮೆರವಣಿಗೆಯ ಶೋಭಾಯಾತ್ರೆಯನ್ನು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ತಾ.ಪಂ. ಮಾಜಿ ಸದಸ್ಯ ಸುರೇಂದ್ರ ದೇಸಾಯಿ, ವ್ಹಿ.ಬಿ.ಕೆಂಚನಗೌಡರ, ಬಿ.ಸಿ.ಕೊಳ್ಳಿ, ಶಿವಾಜಿ ಕಲಾಲ, ಅಮ್ಮಿನಬಾವಿ, ಮರೇವಾಡ, ಚಂದನಮಟ್ಟಿ, ಕೌಲಗೇರಿ ಗ್ರಾಮಗಳ ಶ್ರೀವಿಠೋಬ ದೇವರ ವಾರಕರಿ ಸಂತರ ಬಳಗದ ಸದಸ್ಯರು ಸೇರಿ ಹಲವಾರು ರೈತ ಮುಖಂಡರು ಪಾಲ್ಗೊಂಡಿದ್ದರು. ಹಿಂದೂ ಸಮ್ಮೇಳನದ ಅಂಗವಾಗಿ ಅಮ್ಮಿನಬಾವಿ ಆಂಜನೇಯಸ್ವಾಮಿ ದೇವಾಲಯದ ಆವರಣದಲ್ಲಿ ದಾಸೋಹ ಸೇವೆಯಲ್ಲಿ ಅನ್ನಸಂತರೆ​‍್ಣ ಜರುಗಿತು.