ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ

ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ, ಇದರ ಕುರುಹು ಪೇಳಿ ಕುಳಿತಿರುವ ಜನರು, ಒಂಟಿ ಕೊಂಬಿನ ಪಕ್ಷಿ ಒಡಲೊಳಗೆ ಕರುಳಿಲ್ಲ ಗಂಟಲು ಮೂರು ಉಂಟು, ಮೂಗಿಲ್ಲ ಕುಂಟು ಮನುಜನ ತೆರದಿ ಕುಳಿತಿಹುದು. ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು. ಕನಕದಾಸರು ರಚಿಸಿರುವ ಈ  ಮುಂಡಿಗೆಯಲ್ಲಿನ  ವಾಕ್ಯಗಳು ಮೇಲುನೋಟಕ್ಕೆ ಬೀಸುವ ಕಲ್ಲಿನ ವರ್ಣನೆಯಾದರೆ ಗೌಪ್ಯವಾಗಿ ಇದನ್ನು ಪರಮಾತ್ಮನಿಗೆ ಹೋಲಿಸಲಾಗಿದೆ.

ಇದರ ತಾತ್ಪರ್ಯ ಏನೆಂದರೆ  ಬೀಸುವ ಕಲ್ಲನ್ನು ಹಿಡಿದು ಬೀಸುವ ಮರದ ಗೂಟವೇ ಒಂಟಿ ಕೊಂಬು. ಹೊಟ್ಟೆಯಲ್ಲಿ ಏನೂ ಇಲ್ಲ. ಖಾಲಿ ಶರೀರ. ಬೀಸುವ ಕಲ್ಲಿನ ಮೇಲ್ಭಾಗದ ಕಲ್ಲಿನಿಂದ ಧಾನ್ಯ ಇಳಿಯಲು ಮಾಡಿರುವ ಮೂರು ರಂದ್ರಗಳು. ಉಸಿರಾಟಕ್ಕೆ ಮೂಗು ಇಲ್ಲ. ಎಲ್ಲಿಯೂ ಚಲಿಸದೇ ಇರುವುದು. ಹತ್ತು ಹಲವಾರು ಧಾನ್ಯಗಳನ್ನು ಅದರ ಬಾಯಲ್ಲಿಟ್ಟಾಗ ತಿಂದು ಹಾಕುವುದು. ಇದು ಸಾಮಾನ್ಯವಾದ ಮೇಲುನೋಟದ ಅರ್ಥವಾಗಿದೆ.  ಪಾರಮಾರ್ಥಿಕ ಅರ್ಥದಲ್ಲಿ ಇದನ್ನು ನೋಡಿದಾಗ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಎಂದರೆ ಮಾಯಯನ್ನು ನುಂಗುವ ಚೈತನ್ಯ ರೂಪಿ ಪರಮಾತ್ಮ ದೇಹವೆಂಬ ಮನೆಯೊಳಗೆ ಬಂದು ಕುಳಿತಿದ್ದಾನೆ. ಓಂ ಎಂಬಲ್ಲಿ ಓ ಅಕ್ಷರದ ಮೇಲೆ ದೀರ್ಘ ಸ್ವರದ ಕೊಂಬಿದೆ. ಸಾಂಸಾರಿಕ ವ್ಯಾಮೋಹದ ಕರುಳು ಒಡಲಿನಲ್ಲಿಲ್ಲ. ಓಂಕಾರದ ಅ ಉ ಮ ಮೂರಕ್ಷರಗಳೇ ಮೂರು ರಂದ್ರಗಳು. ವಿಷಯ ವಾಸನೆಯ ಗುಂಗಿಲ್ಲವೆಂಬುದೇ ಮೂಗಿಲ್ಲವೆಂಬುದರ ಅರ್ಥ. ಪಂಚಭೂತಗಳು, ಮನ, ಬುದ್ಧಿ, ಅಹಂಕಾರಗಳೂ ಸೇರಿ ಎಂಟು ಹಾಗೂ ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳೂ ಸೇರಿ ಹತ್ತು ಇವುಗಳ ಮೂಲಕ ಎಲ್ಲಾ ವಿಷಯಗಳನ್ನೂ ಅರಗಿಸಿಕೊಳ್ಳುವುದು ಅಂದರೆ ನಿರ್ಲಿಪ್ತತೆಯನ್ನು ತಂದುಕೊಳ್ಳುವುದು ಎಂದು ಅರ್ಥವಾಗುತ್ತದೆ.
 
ಕನಕದಾಸರ ಇಂತಹ ಇನ್ನೂ ಅನೇಕ ಮುಂಡಿಗೆಗಳು ಅವರ ಸೃಜನಶೀಲತೆಗೆ, ಸಾಹಿತ್ಯ ಶ್ರೀಮಂತಿಕೆಗೆ, ಆಧ್ಯಾತ್ಮಿಕತೆ ವೈಚಾರಿಕತೆಗೆ ಸಾಕ್ಷಿಯಾಗಿವೆ. ಜ್ಞಾನ, ಭಕ್ತಿ, ವೈರಾಗ್ಯಗಳ ಮೂರುತಿಯಾದ ಕನಕದಾಸರು  ದಾಸಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.  ಮುಂಡಿಗೆ ಎಂಬ ಶಬ್ದಕ್ಕೆ  ತೊಲೆ ಅಥವಾ ಮರದ ದಿಮ್ಮಿ ಎಂದು ಅರ್ಥವಾಗುತ್ತದೆ. ಮುಂಡಿಗೆ ಎಂಬುದು ದಾಸಸಾಹಿತ್ಯದಲ್ಲಿ ಸುಲಭವಾಗಿ ಬಿಡಿಸಲಾಗದ ಒಗಟಿನಂತಹ ರಚನೆಗಳಾಗಿದ್ದು ಅರ್ಥಗರ್ಭಿತವಾಗಿರುತ್ತವೆ. ಬಿಗಿಯಾಗಿ ಹಿಡಿದ ಮುಷ್ಟಿಕೆಯಲ್ಲಿನ ಪದಾರ್ಥವನ್ನು ಬಿಡಿಸಿಕೊಳ್ಳಲು ಹೇಗೆ ಸುಲಭವಲ್ಲವೋ ಹಾಗೆಯೇ  ಮುಂಡಿಗೆಗಳ ಹೂರಣವನ್ನು ಹೊರತೆಗೆಯುವುದು ಅಷ್ಟೇ ಕಷ್ಟಸಾಧ್ಯ.  ಮುಷ್ಟಿಕೆ ಎಂಬ ಪದದಿಂದ ಮುಂಡಿಗೆ ಪದ ರೂಪುಗೊಂಡಿರಬೇಕೆಂದು ಕೆಲವೊಂದು ವಿದ್ವಾಂಸರ ಅಭಿಪ್ರಾಯವಾಗಿದೆ.  ಪದ್ಯ ನಿಬದ್ಧವಾಗಿ ಬೆಡಗಿನ ವಚನಗಳನ್ನು ಹೋಲುವ ಮುಂಡಿಗೆಗಳು ರೂಪಕ, ಸಂಕೇತ, ಪ್ರತಿಮೆಗಳ ಮೂಲಕ, ತತ್ವಸ್ವರೂಪ ಹಾಗೂ ಅನುಭಾವದ ನಿಗೂಢತೆಯನ್ನೂ, ಹೇರಳವಾದ ಪುರಾಣ ಪ್ರಸಂಗಗಳನ್ನೂ ಒಳಗೊಂಡಿರುತ್ತವೆ.  ದಾಸಶ್ರೇಷ್ಠ ಕನಕದಾಸರು ಭಕ್ತಿ, ಜ್ಞಾನ ವೈರಾಗ್ಯಗಳನ್ನು ಜನರಲ್ಲಿ ಬಿತ್ತುತ್ತಾ ಸಮಾಜದ ಓರೆಕೋರೆಗಳನ್ನು ಸರಿಪಡಿಸುತ್ತಾ  ಲೋಕಕಲ್ಯಾಣದಲ್ಲಿ  ತೊಡಗಿ  ಹರಿದಾಸ ಸಾಹಿತ್ಯದಲ್ಲಿ ಮಿಂಚಿದರು.

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509 ರಲ್ಲಿ ಜನಿಸಿದರು.  ತಂದೆ ಬೀರಪ್ಪ ತಾಯಿ ಬಿಚ್ಚಮ್ಮನ ಮಗನಾಗಿ ಜನಿಸಿದ ಇವರ ಮೂಲ ಹೆಸರು  ತಿಮ್ಮಪ್ಪ ನಾಯಕ.  ಅದೊಂದು ದಿನ ಕನಸಲ್ಲಿ  ತಿರುಪತಿ ತಿಮ್ಮಪ್ಪ ಪ್ರತ್ಯಕ್ಷನಾಗಿ ತನಗೊಂದು ಗುಡಿ ಕಟ್ಟಿಸಿ ಕೊಡುವಂತೆ ಕೇಳಿದಾಗ ತಿಮ್ಮಪ್ಪ ನಾಯಕ ಮುಂದೆ ದೇವರ ಅಣತಿಯಂತೆ ದೇವಾಲಯವೊಂದನ್ನ ಕಟ್ಟಿಸುವ ಕಾರ್ಯದಲ್ಲಿ ತೊಡಗಿದಾಗ ಅಡಿಪಾಯ ಹಾಕುವುದಕ್ಕೆ ಭೂಮಿ ಅಗೆಯುತ್ತಿರುವ ಸಂದರ್ಭದಲ್ಲಿ ಏಳು ಗಡಿಗೆಗಳಷ್ಟು ಚಿನ್ನದ ನಾಣ್ಯಗಳು ಹಾಗು ಒಂದು ದೇವರ ವಿಗ್ರಹ ಕೂಡ ಅಲ್ಲಿ ಸಿಕ್ಕಿತು.  ಮೂರ್ತಿಯನ್ನು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ತಿಮ್ಮಪ್ಪ ಮುಂದೆ ಸಿಕ್ಕಿದ ಹಣವನ್ನೆಲ್ಲ ಜನರ ಶ್ರೇಯಸ್ಸು ಹಾಗೂ ಧಾರ್ಮಿಕ ಕಾರ್ಯ ಗಳಿಗಾಗಿ ವಿನಿಯೋಗಿಸುವುದಕ್ಕೆ  ಪ್ರಾರಂಭಿಸಿದರು. ಭೂಮಿಯಲ್ಲಿ ಬಂಗಾರ ಸಿಕ್ಕಿದ ಕಾರಣ ಇವರು ಮುಂದೆ ಕನಕ ನಾಯಕ  ಎಂದು ಪ್ರಸಿದ್ಧಿ ಪಡೆದಿರುತ್ತಾರೆ. ತದನಂತರ ಯುದ್ಧವೊಂದರಲ್ಲಿ ವೈರಾಗ್ಯ ಉಂಟಾಗಿ ಅವರು  ಕನಕದಾಸರಾದರು.    

ಪುರಂದರದಾಸರ ಸಮಕಾಲೀನರಾದ ಕನಕದಾಸರು ವೇದಶಾಸ್ತ್ರ, ಉಪನಿಷತ್ತುಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಯತಿವರೇಣ್ಯರಾದ ವ್ಯಾಸತೀರ್ಥರ ಬಳಿಗೆ ಬಂದು ಶಿಷ್ಯತ್ವವನ್ನು ಪಡೆಯುತ್ತಾರೆ. ಪುರಂದರದಾಸರು ಹಾಗೂ ಕನಕದಾಸರನ್ನು ದಾಸಸಾಹಿತ್ಯದ ಅಶ್ವಿನಿ ದೇವತೆಗಳೆಂದೇ ವರ್ಣಿಸಲಾಗಿದೆ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯೇ ಮುಖ್ಯ ಎಂದು ಉಡುಪಿಯ ಶ್ರೀ ಕೃಷ್ಣನ ದರ್ಶನದಿಂದ ದಾಸವರೇಣ್ಯರು  ತೋರಿಸಿಕೊಟ್ಟರು. ಇವರ ಅಂಕಿತನಾಮ ಕಾಗಿನೆಲೆ ಆದಿಕೇಶವ ಎಂಬುದಾಗಿದೆ. ವ್ಯಾಸರಾಯರ ಅಚ್ಚುಮೆಚ್ಚಿನ ಶಿಷ್ಯರಾದ ಕನಕದಾಸರು  ವ್ಯಾಸರಾಯರಿಂದ ಮಧ್ವಶಾಸ್ತ್ರ ಕಲಿತು ಮೋಹನ ತರಂಗಿಣಿ, ನಳ ಚರಿತ್ರೆ , ರಾಮಧಾನ್ಯ ಚರಿತ್ರೆ, ಹರಿಭಕ್ತಸಾರ ಹೀಗೆ ವಿವಿಧಪ್ರಕಾರಗಳ ಕೀರ್ತನೆ, ಸುಳಾದಿಗಳು ಉಗಾಭೋಗಗಳ ರಚನೆ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆಯನ್ನು ಕೊಟ್ಟಿದ್ದಾರೆ.
ತಲ್ಲಣಸಿದರು ಕಂಡ್ಯ ತಾಳು ಮನವೆ ಎಲ್ಲರನು ತಲಹುವನು ಇದಕೆ ಸಂಶಯವಿಲ್ಲ ಎಂದರೆ ಲೋಕದಲ್ಲಿ ಎಲ್ಲರನ್ನೂ  ಸಲಹುವ ಆ ಪರಮಾತ್ಮ ಇರುವಾಗ ಲೋಕದ ಜಂಜಡಗಳಿಗೆ ತಲ್ಲಣಗೊಳ್ಳದೇ ಧೈರ್ಯದಿಂದ ಬಾಳಬೇಕು,   ಭೂಮಿ ಮೇಲಿರುವ ಸಸ್ಯವರ್ಗ , ಪ್ರಾಣಿ ಪಕ್ಷಿ ವರ್ಗಗಳನ್ನು ದೇವರೇ ಸಲಹುತ್ತಿರುವದು, ಮರವೊಂದು ಬೆಟ್ಟದ ತುದಿಯಲ್ಲಿ ಹುಟ್ಟಿದರೆ ಅದಕ್ಕೆ ನೀರೆರೆಯುವುದು ದೇವರೇ ಹೊರತು ಮನುಷ್ಯರಲ್ಲ.  ಅದೇ ರೀತಿ ಅಡವಿಯಲ್ಲಿ ಓಡಾಡುವ ಮೃಗ ಪಕ್ಷಿಗಳಿಗೆ ಹೊತ್ತು ಹೊತ್ತಿಗೆ ಆಹಾರ ಒದಗಿಸುವವನೂ ಭಗವಂತನೇ ಆಗಿರುತ್ತಾನೆ.  ಎಲ್ಲೋ ಕಲ್ಲಿನಲ್ಲಿ ಹುಟ್ಟುವ ಕಪ್ಪೆಗೂ ಅದು ವಾಸಿಸುವಲ್ಲಿಯೇ ದೇವರು ಆಹಾರ ದೊರಕುವಂತೆ ಮಾಡುವನೆಂದ ಮೇಲೆ ನಮ್ಮೆಲ್ಲರನ್ನೂ ಆತ ರಕ್ಷಿಸುವುದರಲ್ಲಿ ಯಾವ ಸಂಶಯವೂ ಇಲ್ಲ .ಆದಕಾರಣ ಮನುಷ್ಯರಾದ ನಾವು ಸುಖಕ್ಕೆ ಹಿಗ್ಗದೇ ದು:ಖಕ್ಕೆ ಕುಗ್ಗದೇ ತಟಸ್ಥಮನಸ್ಕರಾಗಿರಬೇಕು ಎಂದು ಕನಕದಾಸರು ಹೇಳಿದ್ದಾರೆ.  ಪರಮಾತ್ಮನ ಬಗ್ಗೆ ಅನನ್ಯ ಭಕ್ತಿ,  ಅಚಲವಾದ ವಿಶ್ವಾಸ, ದೃಢವಾದ ನಂಬಿಕೆ ಇಟ್ಟು  ತಮ್ಮ ಕರ್ತವ್ಯಗಳನ್ನು ಮಾಡುತ್ತಾ  ಜೀವನ ನಡೆಸಬೇಕು ಎಂದು ಸಮಾಜಕ್ಕೆ  ತಿಳಿಸಿಕೊಟ್ಟಿದ್ದಾರೆ.
 
ಕನಕದಾಸರ ಎಲ್ಲ ಕಾವ್ಯಗಳು ಕವಿ ಸಹಜವಾದ ವರ್ಣನೆಗಳಿಂದ ಉಪಮೆಗಳಿಂದ ಅಲಂಕೃತಗೊಂಡಿದ್ದು ಅವರ ಕಾವ್ಯ ಕೌಶಲ್ಯ ಕವಿಗಳಿಗೆ ಮಾದರಿ. ಅವರ ಕೀರ್ತನೆಗಳಲ್ಲಿ ಭಕ್ತಿಯ ಪಾರಮ್ಯವನ್ನು ಕಾಣಬಹುದಾಗಿದೆ. ವಿನೀತ ಭಾವಹೊಂದಿದ್ದ ಕನಕದಾಸರು ಜಾತಿ, ಮತಗಳ ಕಟ್ಟುಪಾಡಿಲ್ಲದ ಇವರು ತಮ್ಮ ಅನುಭಾವದಿಂದ ಹೊರಹೊಮ್ಮಿರುವ ಭಕ್ತಿ ಭಾವಗಳನ್ನು  ಗೀತೆಗಳ ಮೂಲಕ ಹಾಡಿ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ್ದಾರೆ.

ಇಂದಿನ ಯಾಂತ್ರಿಕ, ಒತ್ತಡಮಯ, ಸ್ಪರ್ಧಾತ್ಮಕ ಯುಗದಲ್ಲಿ ದಾಸಶ್ರೇಷ್ಟರಾದ ಕನಕದಾಸರ ಜಯಂತಿಯನ್ನು ಆಚರಿಸುವುದಷ್ಟೇ ಅಲ್ಲದೇ ಆಧ್ಯಾತ್ಮಿಕತೆ, ವೈಚಾರಿಕತೆ, ಧಾರ್ಮಿಕತೆ, ಭಕ್ತಿ ಪರವಶತೆಯಿಂದ ಪರಮಾತ್ಮನ ಕುರಿತು  ರಚಿಸಿರುವ ಕೃತಿ, ಕೀರ್ತನೆ, ಸುಳಾದಿ, ಮುಂಡಿಗೆ, ಭಕ್ತಿಗೀತೆಗಳನ್ನು ಅರ್ಥೈಸಿಕೊಳ್ಳುವುದು ಸಹ ಇಂದಿನ ಅವಶ್ಯಕತೆಯಾಗಿದೆ. ಅಂದಾಗ ಮಾತ್ರ ಸಮಾಜದಲ್ಲಿ ಪ್ರತಿಯೊಬ್ಬರೂ ಸಂತೃಪ್ತ , ಶಾಂತ ರೀತಿಯ ಜೀವನ ನಡೆಸಲು ಸಾಧ್ಯವಾಗಲಿದೆ.       
                                   
                                                           -ಅಂಜನಾ ರಾಘವೇಂದ್ರ ಕುಬೇರ
                                                           ವಾರ್ತಾ ಮತ್ತು ಸಾ.ಸಂ.ಇಲಾಖೆ,ಗದಗ.