ಅಡವಿ ಸೋಮಾಪುರದಲ್ಲಿ ವಿಶ್ವ ಸೊಳ್ಳೆ ದಿನಾಚರಣೆ
World Mosquito Day observed at Adavi Somapura
ಗದಗ, ಆ.20: ಮಲೇರಿಯಾ, ಡೆಂಗ್ಯೂ, ಚಿಕೂನ್ಗುನ್ಯಾ, ಆನೆಕಾಲು ಸೇರಿದಂತೆ ವಿವಿಧ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೀತ್ ಖೋನಾ ಹೇಳಿದರು.
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ ಲಕ್ಕುಂಡಿ ಹಾಗೂ ಆಯುಷ್ಮಾನ್ ಆರೋಗ್ಯ ಕೇಂದ್ರ ಅಡವಿ ಸೋಮಾಪುರದ ಸಂಯುಕ್ತ ಆಶ್ರಯದಲ್ಲಿ ಅಡವಿ ಸೋಮಾಪುರದ ಆಯುಷ್ಮಾನ್ ಆರೋಗ್ಯ ಮಂದಿರದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವ ಸೊಳ್ಳೆ ದಿನಾಚರಣೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸೊಳ್ಳೆಗಳ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ ಅಗತ್ಯ. ‘ಸೊಳ್ಳೆಗಳ ನಿಯಂತ್ರಣ ನಿಮ್ಮಿಂದ, ನಿಮಗಾಗಿ, ನಿಮ್ಮ ಮನೆಯ ಬಾಗಿಲಲ್ಲಿ’ ಎಂಬುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಂಡು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್. ಗಡಾದ ಮಾತನಾಡಿ, ಸೊಳ್ಳೆಗಳು ದೇಹದ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಮನುಕುಲಕ್ಕೆ ದೊಡ್ಡ ವೈರಿಗಳಾಗಿವೆ. 1902ರಲ್ಲಿ ವೈದ್ಯಕೀಯ ವಿಜ್ಞಾನಕ್ಕಾಗಿ ನೋಬೆಲ್ ಪ್ರಶಸ್ತಿ ಪಡೆದ ಸರ್ ರೊನಾಲ್ಡ್ ರಾಸ್ ಅವರು ಸೊಳ್ಳೆಗಳಿಂದ ಮಲೇರಿಯಾ ಹರಡುತ್ತದೆ ಎಂಬುದನ್ನು ಸಂಶೋಧನೆಯ ಮೂಲಕ ಜಗತ್ತಿಗೆ ತಿಳಿಸಿದರು. ಅವರ ಸ್ಮರಣಾರ್ಥ ಹಾಗೂ ಸೊಳ್ಳೆಗಳಿಂದ ಹರಡುವ ರೋಗಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಗಸ್ಟ್ 20ರಂದು ವಿಶ್ವ ಸೊಳ್ಳೆ ದಿನ ಆಚರಿಸಲಾಗುತ್ತಿದೆ ಎಂದರು.
ಸೊಳ್ಳೆಗಳಿಂದ ಹರಡುವ ವಿವಿಧ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಿ ಸೊಳ್ಳೆಮುಕ್ತ ಹಾಗೂ ಆರೋಗ್ಯವಂತ ಸಮಾಜ ನಿರ್ಮಿಸಬೇಕು ಎಂದು ಕರೆ ನೀಡಿದರು.
ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ಯಲ್ಲಪ್ಪ ಹಕ್ಕಿ ಮಾತನಾಡಿ, ಸೊಳ್ಳೆಗಳಿಂದ ಹರಡುವ ರೋಗಗಳ ಪ್ರಮುಖ ಲಕ್ಷಣಗಳು ಹಾಗೂ ಅವುಗಳ ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಪತ್ತೆಹಚ್ಚಿ ನಾಶಪಡಿಸುವ ವಿಧಾನವನ್ನು ವಿವರಿಸಿದರು.
ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನೀರೀಕ್ಷಣಾಧಿಕಾರಿ ಸಿದ್ದಪ್ಪ ಲಿಂಗದಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವ ಸೊಳ್ಳೆ ದಿನಾಚರಣೆಯ ಉದ್ದೇಶ ಹಾಗೂ ಸೊಳ್ಳೆ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನೀರೀಕ್ಷಣಾಧಿಕಾರಿ ವೈ.ಎನ್. ಕಡೇಮನಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿ ಶ್ರೀಮತಿ ಟಿ.ಎಸ್. ರಾಯಬಾಗಿ, ಶ್ರೀಮತಿ ಸವಿತಾ ಪವಾರ್ ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯರು, ಗರ್ಭಿಣಿಯರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಆಶಾ ಕಾರ್ಯಕರ್ತೆ ಶ್ರೀಮತಿ ಮಾಲಾ ಪ್ರಾರ್ಥಿಸಿದರು. ಆರೋಗ್ಯ ನೀರೀಕ್ಷಣಾಧಿಕಾರಿ ಮುತ್ತಪ್ಪ ಹಟ್ಟಿಮನಿ ಸ್ವಾಗತಿಸಿದರು. ಸಿದ್ದಪ್ಪ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಎಸ್.ಬಿ. ಗಡಾದ ವಂದಿಸಿದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 