ಕನಿಷ್ಠ ವೇತನ ಅಧಿಸೂಚನೆ ತಕ್ಷಣ ಜಾರಿಗೊಳಿಸಲು ಆಗ್ರಹ
ದಾಂಡೇಲಿ, ಆ. 18: ಕಾರ್ಮಿಕರ ವಿವಿಧ ಸಮಸ್ಯೆಗಳನ್ನು ಪರಿಹರಿಸುವಂತೆ ಆಗ್ರಹಿಸಿ ದಾಂಡೇಲಿಯ ಪೇಪರ್‌ಮಿಲ್ ಮಜ್ದೂರ್ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಸೋಮವಾರ ಅಂಬೇವಾಡಿಯ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಅವರಿಗೆ ಸಲ್ಲಿಸುವ ಮನವಿಯನ್ನು ತಹಶೀಲ್ದಾರ್ ಮೂಲಕ ಸಲ್ಲಿಸಿದರು.
ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಸ್ವಾಗತಿಸಿರುವ ಸಂಘ, ಸರ್ಕಾರ ಬದಲಾವಣೆಯಾದ ಹಿನ್ನೆಲೆಯಲ್ಲಿ ಅಧಿಸೂಚನೆಯನ್ನು ಜಾರಿಗೊಳಿಸದೆ ಪುನಃ ಸ್ಥಗಿತಗೊಳಿಸುವ ಚಿಂತನೆ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿತು. ಬಂಡವಾಳಶಾಹಿಗಳು ಹಾಗೂ ಆಡಳಿತ ಮಂಡಳಿಗಳ ಒತ್ತಡಕ್ಕೆ ಮಣಿದು ಅಧಿಸೂಚನೆಯನ್ನು ಪುನರ್‌ಪರಿಶೀಲಿಸುವ ಸರ್ಕಾರದ ನಿರ್ಧಾರ ಸರಿಯಲ್ಲ. ಇದರಿಂದ ಲಕ್ಷಾಂತರ ಬಡ ಕಾರ್ಮಿಕರ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರವು ಮೇ ತಿಂಗಳಲ್ಲಿ ಹೊರಡಿಸಿರುವ ಕನಿಷ್ಠ ವೇತನ ಅಧಿಸೂಚನೆಯನ್ನು ಹಿಂಪಡೆಯದೆ ತಕ್ಷಣ ಜಾರಿಗೊಳಿಸಬೇಕು. ಇಪಿಎಫ್-95 ಪಿಂಚಣಿಯನ್ನು ₹1,000ರಿಂದ ₹7,500ಕ್ಕೆ ಹೆಚ್ಚಿಸಬೇಕು. ಇಎಸ್‌ಐ ವ್ಯಾಪ್ತಿಯ ವೇತನ ಮಿತಿಯನ್ನು ₹42 ಸಾವಿರಕ್ಕೆ ಹೆಚ್ಚಿಸಿ ಹೆಚ್ಚಿನ ಕಾರ್ಮಿಕರಿಗೆ ಸೌಲಭ್ಯ ದೊರೆಯುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ, ಇಪಿಎಫ್ ವಂತಿಕೆ ಮಿತಿಯನ್ನು ₹30 ಸಾವಿರಕ್ಕೆ ಹೆಚ್ಚಿಸಬೇಕು. ಉಪಧನದ ಮಿತಿಯನ್ನು 15 ದಿನಗಳಿಂದ ಒಂದು ತಿಂಗಳಿಗೆ ಹೆಚ್ಚಿಸುವುದರ ಜೊತೆಗೆ ಅದರ ಗರಿಷ್ಠ ಮಿತಿಯನ್ನು ₹20 ಲಕ್ಷದಿಂದ ₹40 ಲಕ್ಷಕ್ಕೆ ಏರಿಸಬೇಕು. ಬೋನಸ್ ಮಿತಿಯನ್ನು ₹7 ಸಾವಿರದಿಂದ ₹18 ಸಾವಿರಕ್ಕೆ ಹೆಚ್ಚಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಪೇಪರ್‌ಮಿಲ್ ಮಜ್ದೂರ್ ಸಂಘದ ಪ್ರಧಾನ ಕಾರ್ಯದರ್ಶಿ ಭರತ ಪಾಟೀಲ್, ಭವರ್ ಸಿಂಗ್, ಶಿವಬಸಪ್ಪ, ಮೋಹನ ಸಿಂಗ್, ಗೋಪಾಲ ಸಿಂಗ್, ಗುರುದಾಸ, ನಾಗರಾಜ ಕಲ್ಲಬಾವಿ, ವಿರುಪಾಕ್ಷಿ, ಅರ್ಜುನ ಗವಸ, ಸುರೇಶ ಪಾಟೀಲ್, ಸೋಮಶೇಖರ್, ಗಣಪತಿ ಸೇರಿದಂತೆ ಹಲವರು ಭಾಗವಹಿಸಿದ್ದರು.