ಮಹಿಳಾ ಶಿಕ್ಷಣವೇ ಕುಟುಂಬದ ಪ್ರಗತಿಗೆ ಬುನಾದಿ

ಮಹಿಳಾ ಶಿಕ್ಷಣವೇ ಕುಟುಂಬದ ಪ್ರಗತಿಗೆ ಬುನಾದಿ Women’s Education Lays the Foundation for Family Progress

ಧಾರವಾಡ, ಆ. 19: ಶಿಕ್ಷಣ ಪ್ರತಿಯೊಬ್ಬ ಮನುಷ್ಯನ ಮೂಲಭೂತ ಹಕ್ಕಾಗಿದ್ದು, ಹೆಣ್ಣುಮಕ್ಕಳು ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗುತ್ತದೆ. ಶಿಕ್ಷಣದಿಂದ ಮಾತ್ರ ತಾಯಿ ತನ್ನ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಲು ಸಾಧ್ಯ ಎಂದು ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಹೇಳಿದರು.

ನಗರದ ಕಲ್ಲವ್ವ ಶಿವಪ್ಪಣ್ಣ ಜಿಗಳೂರ ಹಾಗೂ ಸುಶೀಲ ಮುರಿಗೆಪ್ಪ ಶೇಷಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪ ಆಯೋಜಿಸಿದ್ದ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೇವಲ ಪದವಿ ಪಡೆಯುವುದೇ ಶಿಕ್ಷಣದ ಗುರಿಯಲ್ಲ. ಶಿಕ್ಷಣವು ವ್ಯಕ್ತಿಯ ಅರಿವಿನ ವಿಸ್ತಾರಕ್ಕೆ ಕಾರಣವಾಗುವುದರ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನೂ ಕಲಿಸುತ್ತದೆ. ಮಹಿಳಾ ಶಿಕ್ಷಣವು ಕುಟುಂಬ, ಸಮಾಜ ಹಾಗೂ ದೇಶದ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತದೆ. ಒಬ್ಬ ಪುರುಷ ಶಿಕ್ಷಣ ಪಡೆದರೆ ಒಬ್ಬ ವ್ಯಕ್ತಿ ಶಿಕ್ಷಣ ಪಡೆದಂತಾಗುತ್ತದೆ; ಆದರೆ ಒಬ್ಬ ಮಹಿಳೆ ಶಿಕ್ಷಣ ಪಡೆದರೆ ಇಡೀ ಕುಟುಂಬವೇ ಸುಶಿಕ್ಷಿತವಾಗಲು ಸಾಧ್ಯ. ಶಿಕ್ಷಿತ ತಾಯಿ ಮಾತ್ರ ಮಕ್ಕಳ ಆರೋಗ್ಯದ ಬಗ್ಗೆ ಸೂಕ್ತ ಕಾಳಜಿ ವಹಿಸಲು ಸಾಧ್ಯ ಎಂದು ಅವರು ಹೇಳಿದರು.

ಪ್ರಸೂತಿ ಹಾಗೂ ಹೆರಿಗೆ ತಜ್ಞೆ ಡಾ. ಗೀತಾ ಭರತ್ ಉತ್ತೂರ ‘ಮಹಿಳೆ: ಶಿಕ್ಷಣ ಹಾಗೂ ಆರೋಗ್ಯ’ ಕುರಿತು ಉಪನ್ಯಾಸ ನೀಡಿದರು. ಕುಟುಂಬ ನಿರ್ವಹಣೆಯ ಒತ್ತಡದಲ್ಲಿ ಮಹಿಳೆಯರು ತಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆರೋಗ್ಯವಂತರಾಗಿದ್ದಾಗ ಮಾತ್ರ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯ. ಇಂದಿನ ದಿನಗಳಲ್ಲಿ ಮಹಿಳೆಯರಲ್ಲಿ ರಕ್ತಹೀನತೆ, ಖಿನ್ನತೆ, ಸುಸ್ತು ಹಾಗೂ ಥೈರಾಯ್ಡ್‌ನಂತಹ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಋತುಚಕ್ರದ ಅಸಮತೆಯೂ ಗಂಭೀರ ಸಮಸ್ಯೆಯಾಗಿದ್ದು, ಸಮತೋಲನ ಆಹಾರ, ನಿಯಮಿತ ದೈಹಿಕ ಚಟುವಟಿಕೆ ಹಾಗೂ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯ ಡಾ. ಜೆ.ಎಂ. ನಾಗಯ್ಯ ಹಾಗೂ ಆಡಳಿತಾಧಿಕಾರಿ ಎಸ್.ಕೆ. ಹೊಸಂಗಡಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯೆ ಪ್ರೊ. ರಾಜೇಶ್ವರಿ ಶೆಟ್ಟರ ಸ್ವಾಗತಿಸಿದರು. ಕ.ವಿ.ವ. ಸಂಘದ ಶಿಕ್ಷಣ ಮಂಟಪದ ಸಂಚಾಲಕ ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಶ್ವಿನಿ ಪಾಟೀಲ ಪರಿಚಯಿಸಿದರು. ಚೇತನ ಎಂ.ವ್ಹಿ. ನಿರೂಪಿಸಿದರು. ಡಾ. ದತ್ತಾ ಕಾಮಕರ ವಂದಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರು, ಉಪನ್ಯಾಸಕರು, ವಿಜಯಕುಮಾರ ಗಿಡ್ನವರ ದಂಪತಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.