ಆದಿತ್ಯರಾವ್ ಮೇಲೆ ಬಿಜೆಪಿಗೆ ಏಕೆ ಕನಿಕರ: ಜಮೀರ್ ಪ್ರಶ್ನೆ

ಬೆಂಗಳೂರು,ಜ‌.23 :     ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ  ಆದಿತ್ಯರಾವ್ ಮಾನಸಿಕ ಅಸ್ವಸ್ಥನಲ್ಲ‌. ಅವನೊಬ್ಬ ಭಯೋತ್ಪಾದಕ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಆರೋಪಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿತ್ಯಾರಾವ್ ಪೊಲೀಸರಿಗೆ ಶರಣಾಗದೇ ಇದ್ದಿದ್ದರೆ ಬಿಜೆಪಿ ನಾಯಕರು ಮಸಲ್ಮಾನ್ ಸಮುದಾಯದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಆದಿತ್ಯ ರಾವ್ ಬಂಧನಕ್ಕೂ ಮೊದಲೇ ಸಂಸದ ಪ್ರಹ್ಲಾದ್ ಜೋಶಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿದ್ದರು. ಅದರಂತೆ ಗೃಹ ಸಚಿವರು ಕೂಡ ಮುಸಲ್ಮಾನ್ ಅವರನ್ನೇ ಗುರಿ ಮಾಡಿಕೊಂಡು ಟೀಕೆಮಾಡಿದ್ದರು. ಒಂದು ವೇಳೆ ಮುಸ್ಲೀಂ ಸಮುದಾಯದವರು ಭಾಗಿಯಾಗಿದ್ದಿದ್ದರೆ ಬಿಜೆಪಿಯವರು ಆಕಾಶ ಭೂಮಿ ಒಂದು ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು. 

ಬಾಂಗ್ ಇಟ್ಟಿದ್ದು ತಾನೇ ಎಂದು ಆದಿತ್ಯರಾವ್ ಸ್ವಯಂ ಹೇಳಿಕೆ ನೀಡಿದ ಮೇಲೂ ಅವನೊಬ್ಬ ಮಾನಸಿಕ ಅಸ್ವಸ್ಥ. ನಿರುದ್ಯೋಗಿ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇದು ಗೃಹ ಸಚಿವರಾದವರು ನೀಡುವ ಹೇಳಿಕೆಯೇ? ಹಾಗಾದರೆ ಮಾನಸಿಕ  ಸ್ಥಿಮಿತ ಇಲ್ಲದವರೆಲ್ಲರೂ ಗೃಹ ಸಚಿವರ ಮನೆಗೆ ಬಾಂಬ್ ಇಡಬಹುದೇ? ಎಂದು ಜಮೀರ್ ತಿರುಗೇಟು ನೀಡಿದರು.

ಶಾಸಕ ಎನ್.ಎ.ಹ್ಯಾರಿಸ್ ಮೇಲೆ ದಾಳಿಯಾಗಿದೆ. ಆ ಜಾಗದಲ್ಲಿ ಬೇರೆ ಸಮುದಾಯದವರು ಇದ್ದಿದ್ದರೆ ಏನು ಮಾಡಬೇಕಿತ್ತು ?. ದೇವರು ದೊಡ್ಡವನು. ಬಾಂಬ್ ದಾಳಿಯಲ್ಲಿ ಮುಸಲ್ಮಾನರ ಹೆಸರಿಲ್ಲ. ಬಿಜೆಪಿ ನಾಯಕರು ಮೊದಲಿನಿಂದಲೂ ಮುಸಲ್ಮಾನ್ ಸಮುದಾಯದವರು ದಾಳಿ ಮಾಡಿದ್ದಾರೆ, ಬಾಂಬ್ ಹಾಕಿದ್ದಾರೆ ಎಂದು ಆರೋಪಿಸುತ್ತಿದ್ದರು. ಈಗ ಮೌನಕ್ಕೆ ಶರಣಾಗಿದ್ದಾರೆ ಎಂದರು. 

ಅಲ್ಪಸಂಖ್ಯಾತ ಸಮುದಾಯದ ಜಮಿರ್ ಅಹಮದ್ ಖಾನ್, ಹ್ಯಾರಿಸ್  ಹೆಸರು ಇದ್ದಿದ್ದರೆ ಬಿಜೆಪಿಯವರು ಮಾನಸಿಕ ಎನ್ನುತ್ತಿದ್ದರೆ?. ಟೀಕಾ ಪ್ರಹಾರ ಮಾಡುತ್ತಿದ್ದರು. ಆದಿತ್ಯ ರಾವ್ ಮೇಲೆ  ಬಿಜೆಪಿಗೆ ಏಕೆ  ಕನಿಕರ, ಏಕೆ ಅವರ ಪರವಾಗಿ ವಕಾಲತ್ತು ವಹಿಸುತ್ತಿದ್ದಾರೆ .

ಬಿಜೆಪಿ ಅವರು ರಾಜಕೀಯ ಲಾಭಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಅಷ್ಟೇ ಎಂದರು.