ಕೊಲೆಗಾರನ ಕೃತ್ಯಕ್ಕೆ ಸಮುದಾಯದ ಹೆಸರೇಕೆ; ಮಳಗಿ ಅರಣ್ಯ ಕೊಲೆ ಪ್ರಕರಣದಲ್ಲಿ ಜಾತಿ ಎಳೆದಿದ್ದಕ್ಕೆ ಭಾರಿ ಆಕ್ರೋಶ!

ಕೊಲೆಗಾರನ ಕೃತ್ಯಕ್ಕೆ ಸಮುದಾಯದ ಹೆಸರೇಕೆ; ಮಳಗಿ ಅರಣ್ಯ ಕೊಲೆ ಪ್ರಕರಣದಲ್ಲಿ ಜಾತಿ ಎಳೆದಿದ್ದಕ್ಕೆ ಭಾರಿ ಆಕ್ರೋಶ!  Why is the community's name being used for the killer's act? Huge outrage over caste being dragged i

ಲೋಕದರ್ಶನ ವರದಿ 

 ಮುಂಡಗೋಡ 13 :  ತಾಲೂಕಿನ ಎದೆ ನಡುಗಿಸಿದ ಪ್ರಕರಣದ ಬಗ್ಗೆ ನಿಮಗೆಲ್ಲಾ ಗೊತ್ತೇ ಇದೆ? ಅಮಾಯಕ ವೃದ್ದೆಯೊಬ್ಬಳು ಕಾಡಂಚಲ್ಲಿ ಅನಾಥ ಶವವಾಗಿದ್ದಳು, ಆಕೆಯ ಸುಳಿವು ಹುಡುಕಿ ಹೊರಟವರಿಗೆ ಪೊಲೀಸರಿಗೆ ತಿಳಿದಿದ್ದು ತೋಳದ ಹಾಗೆ ಸ್ನೇಹ, ವಾತ್ಯಲ್ಯ ಸಂಪಾದಿಸಿ ಅವಳಿಗೆ ‘ಅಮ್ಮ’ ಎಂದು ಕರೆದವನೇ ಆಕೆಯನ್ನು ಕೊಂದೆಸಿದ ಪಾಪಿ ಎಂದು! ಆದರೆ ಈಗ ಇಡೀ ಮೇದಾರ್ ಸಮಾಜ ಕೊಲೆಗಡುಕನ ವಿರುದ್ಧ ರೊಚ್ಚಿಗೆದ್ದಿದೆ ಮಳಗಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಗಿ ಅರಣ್ಯ ಪ್ರದೇಶದಲ್ಲಿ ಇತ್ತೀಚೆಗೆ ನಡೆದ ಭೀಕರ ಕೊಲೆ ಪ್ರಕರಣವನ್ನು ಖಂಡಿಸಿ, ಗುರು ಮೇದಾರ ಕೇತೇಶ್ವರ ಸಮಾಜ ಹಾಗೂ ಮಳಗಿ ಗ್ರಾಮದ ಬುಡಕಟ್ಟು ಮೇದಾರ ಸಮುದಾಯದ ವತಿಯಿಂದ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿ, ಪೊಲೀಸ್ ಇನ್ಸ್ಪೆಕ್ಟರ್ ರಂಗನಾಥ ನೀಲಮ್ಮನವರ ಅವರಿಗೆ ಮನವಿ ಸಲ್ಲಿಸಲಾಯಿತು.  

ಪಟ್ಟಣದ ಪ್ರವಾಸ ಮಂದಿರದಿಂದ ಶಿವಾಜಿ ಸರ್ಕಲ್ ಮೂಲಕ ಘೋಷಣೆಗಳನ್ನು ಕೂಗುತ್ತಾ ಪೊಲೀಸ್ ಠಾಣೆಯವರೆಗೆ ಮೆರವಣಿಗೆ ನಡೆಸಿದ ಸಮುದಾಯದ ಮುಖಂಡರು, ಘಟನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮಳಗಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಸಣ್ಣ ಗೂಡಂಗಡಿ ನಡೆಸುತ್ತಾ ಸೌಮ್ಯ ಸ್ವಭಾವದಿಂದ ಎಲ್ಲರಿಗೂ ಪರಿಚಿತಳಾಗಿದ್ದ ಶಿವಕ್ಕ ಎಂಬಾಕೆಯ ಕೊಲೆಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಈ ಕೃತ್ಯ ಎಸಗಿದ ಆರೋಪಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಮನಮನೆ ಗ್ರಾಮದ ಕೃಷ್ಣಪ್ಪ ಎಂದು ಗುರುತಿಸಲಾಗಿದೆ.  

ಈತ ಮಳಗಿ ಗ್ರಾಮದವನಲ್ಲದಿದ್ದರೂ ಕಳೆದ ಕೆಲವು ದಿನಗಳಿಂದ ಇಲ್ಲಿ ವಾಸವಿದ್ದ ಎನ್ನಲಾಗಿದೆ. ಇಂತಹ ಭೀಕರ ಕೃತ್ಯ ಎಸಗಿರುವ ಆರೋಪಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗದಂತೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಮತ್ತು ಸೂಕ್ತ ಶಿಕ್ಷೆ ವಿಧಿಸಬೇಕು.  

ಈ ಘಟನೆಗೆ ಸಂಬಂಧಿಸಿದಂತೆ ಕೆಲವು ಕಡೆ "ಮೇದಾರರು ಕೊಲೆ ಮಾಡಿದ್ದಾರೆ" ಎಂಬ ತಪ್ಪು ಸಂದೇಶಗಳು ಹರಡುತ್ತಿವೆ. ಮೇದಾರ ಎಂಬುದು ಗೌರವಾನ್ವಿತ ಬುಡಕಟ್ಟು ಜನಾಂಗದ ಹೆಸರಾಗಿದ್ದು, ವರದಿಗಳಲ್ಲಿ ಕೇವಲ ಆರೋಪಿಯ ಹೆಸರು ಮತ್ತು ಊರನ್ನು ಮಾತ್ರ ಉಲ್ಲೇಖಿಸಬೇಕು. ಸಮುದಾಯದ ಹೆಸರನ್ನು ಈ ಕೃತ್ಯಕ್ಕೆ ತಳುಕು ಹಾಕಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ಗುರು ಮೇದಾರ ಕೇತೇಶ್ವರ ಸಮಾಜದ ಅಧ್ಯಕ್ಷ ಪರಮೇಶ್ವರ್ ಎಚ್‌. ಇಡಗೋಡ, ಮುಖಂಡರಾದ ಪರಶುರಾಮ ಟಿ. ಮೇದಾರ, ಮಂಜುನಾಥ್ ಆರ್‌. ಪಾಟೀಲ್, ಚಂದ್ರು ಇಡಗೋಡ, ಘನಶ್ಯಾಮ ಟಿ. ಪಾಟೀಲ, ಸುರೇಶ್ ಪಿ. ಪಾಟೀಲ, ಬಸವರಾಜ ಡಿ. ಮೇದಾರ ಸೇರಿದಂತೆ ರೋಜಾ ಮೇದಾರ, ಜಯಶ್ರೀ ಜಡೆ, ರೇಣುಕಾ ಟಿ. ಜಡೆ, ಮಂಜುಳ ಆರ್‌. ಮೇದಾರ, ಕಿರಣ್ ಮೇದಾರ ಹಾಗೂ ಮಳಗಿ ಗ್ರಾಮದ ನೂರಾರು ಸಾರ್ವಜನಿಕರು ಉಪಸ್ಥಿತರಿದ್ದರು.