ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು: ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಪರೀಶೀಲನೆ
Water from Krishna River to Lakes: Minister-in-charge Satish Jarkiholi Inspects
ರಾಯಬಾಗ, ಫೆ.02: ತಾಲೂಕಿನ ಮೇಖಳಿ ಹಾಗೂ ಮಾವಿನಹೊೊಂಡ ಕೆರೆಗಳಿಗೆ ಕೃಷ್ಣಾ ನದಿಯಿಂದ ನೀರು ತುಂಬಿಸುವ ಕಾಮಗಾರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಪರೀಶೀಲಿಸಿದರು.
ಕೃಷ್ಣಾ ನದಿಯಿಂದ ತಾಲೂಕಿನ 39 ಕೆರೆಗಳನ್ನು ತುಂಬಿಸುವ ಕಾರ್ಯ ಆರಂಭವಾಗಿದ್ದು, ನೀರು ಹರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಸಚಿವರು ಕೆರೆಗಳಿಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರೀಶೀಲಿಸಿದರು. ಮೇಖಳಿ ಗ್ರಾಮದಲ್ಲಿ ಮಹಿಳೆಯರು ಆರತಿ ಬೆಳಗುವ ಮೂಲಕ ಸಚಿವರನ್ನು ಸ್ವಾಗತಿಸಿದರು. ಕೆರೆಗೆ ನೀರು ಹರಿಸುವಲ್ಲಿ ಸಹಕರಿಸಿದ ರೈತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, “ಕೆರೆಗಳನ್ನು ಹಂತ ಹಂತವಾಗಿ ತುಂಬಿಸುವ ಕಾರ್ಯ ನಡೆಯುತ್ತಿದೆ. ಶೀಘ್ರದಲ್ಲೇ ಎಲ್ಲ ಕೆರೆಗಳನ್ನು ಭರ್ತಿ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೊಳವೆಬಾವಿ ಹಾಗೂ ಬಾವಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಲಿದೆ” ಎಂದರು.
“ರೈತರು ಯಾವುದೇ ಆತಂಕಪಡಬೇಕಿಲ್ಲ. ಡಿಸೆಂಬರ್ವರೆಗೆ ನೀರು ಹರಿಸುವ ಮೂಲಕ ಕೆರೆಗಳನ್ನು ತುಂಬಿಸಲಾಗುವುದು. ಇದಕ್ಕೆ ರೈತರ ಸಹಕಾರ ಅಗತ್ಯ. ಸಣ್ಣಪುಟ್ಟ ದುರಸ್ತಿ ಕಾರ್ಯಗಳನ್ನು ಶೀಘ್ರ ಪೂರ್ಣಗೊಳಿಸಿ ಕೆರೆಗಳಿಗೆ ನಿರಂತರ ನೀರು ಹರಿಸುವ ಕ್ರಮ ಕೈಗೊಳ್ಳಲಾಗುವುದು” ಎಂದು ಹೇಳಿದರು.
ಘಟಪ್ರಭಾ ಎಡದಂಡೆ ಕಾಲುವೆಗೆ ನೀರು ಹರಿಸಲಾಗುತ್ತಿದ್ದು, ರೈತರು ಪಂಪ್ಸೆಟ್ಗಳು ಹಾಗೂ ಕಾಲುವೆಗಳ ಮೂಲಕ ನೀರು ಬಳಸಿಕೊಳ್ಳುತ್ತಿದ್ದಾರೆ. ಈ ಕುರಿತು ಸಮಗ್ರ ಸಭೆ ನಡೆಸಿ ಕೊನೆಯ ಹಳ್ಳಿಯವರೆಗೂ ನೀರು ತಲುಪಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಕೆರೆ ತುಂಬಿಸುವ ಯೋಜನೆಯಲ್ಲಿ ಯಾರಾದರೂ ಕ್ರೆಡಿಟ್ ಪಡೆಯಬಹುದು. ಆದರೆ ಯೋಜನೆಯ ಇತಿಹಾಸವನ್ನು ಅರಿತುಕೊಳ್ಳಬೇಕು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಮಂಜೂರಾದ ಕೆರೆ ತುಂಬಿಸುವ ಯೋಜನೆ, ನಂತರದ ಅವಧಿಯ ನಿರಂತರ ಪ್ರಯತ್ನದಿಂದ ಅನುಷ್ಠಾನಗೊಂಡಿದೆ ಎಂದು ಸಚಿವರು ಹೇಳಿದರು.
ಈ ಯೋಜನೆಗೆ ಗ್ರಾಮ ಪಂಚಾಯಿತಿ ಸದಸ್ಯರೂ ತೆಂಗಿನಕಾಯಿ ಒಡೆದು ಚಾಲನೆ ನೀಡಬಹುದು. ಆದರೆ ಜನರಿಗೆ ತಪ್ಪು ಮಾಹಿತಿ ನೀಡುವ ಬದಲು ಯೋಜನೆಯ ಹಿನ್ನೆಲೆಯನ್ನು ತಿಳಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಅರ್ಜುನ ನಾಯಿಕ, ಎನ್.ಎ. ಮಗದುಮ್, ಅಪ್ಪಾಸಾಬ ಕುಲಗುಡೆ, ಶಂಕರಗೌಡ ಪಾಟೀಲ, ಸಿದ್ಧಾರೂಢ ಬಂಡಗರ್, ವಸಂತ ಕರಿಗಾರ, ವಿವೇಕ ಹಟ್ಟಿಕಾರ, ಗಣೇಶ ಮೊಹಿತೆ, ಮಲ್ಲಕಾರಿ ಕೊಟ್ರೆ, ಜ್ಯೋತಿ ಕೆಂಪಟ್ಟಿ, ಅಶೋಕ ನಾಯಿಕ, ಅರ್ಜುನ ಬಂಡಗರ್, ನಾಮದೇವ ಕಾಂಬಳೆ, ಹಾಜಿ ಮುಲ್ಲಾ, ಅನ್ನಪ್ಪ ಸಮಾಜೆ, ಪಿಂಟು ಕರಿಗಾರ, ಅಬ್ದುಲ್ ಸತ್ತಾರ್ ಮುಲ್ಲಾ, ಸಹದೇವ ಯಡ್ರಾಂವೆ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 