ಪೈಪ್‌ಲೈನ್ ಹಾನಿಗೆ ಪರಿಹಾರ ನೀಡದಿದ್ದರೆ ಕಾಮಗಾರಿ ಸ್ಥಗಿತದ ಎಚ್ಚರಿಕೆ
ಲೋಕದರ್ಶನ ವರದಿ
ಮಾಂಜರಿ 25: ಗೋಟೂರನಿಂದ ಜೀವರ್ಗಿವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ಮಾಂಜರಿ ಗ್ರಾಮದ ಅನೇಕ ರೈತರ ಕೃಷಿ ಜಮೀನುಗಳಿಗೆ ನೀರು ಪೂರೈಸುವ ಪೈಪ್‌ಲೈನ್‌ಗಳಿಗೆ ಭಾರಿ ಹಾನಿಯಾಗಿದೆ. ಹಾನಿಗೊಳಗಾದ ರೈತರಿಗೆ ತಕ್ಷಣ ಆರ್ಥಿಕ ಪರಿಹಾರ ನೀಡಬೇಕು ಹಾಗೂ ರೈತರ ಸಮಸ್ಯೆಗಳನ್ನು ಆಲಿಸಿ ಹೆದ್ದಾರಿ ಕಾಮಗಾರಿ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಾಂಜರಿ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ಹಾಗೂ ಬಿಜೆಪಿ ಯುವ ಮುಖಂಡ ಶೀತಲ್ ಯಾದವ್ ಅವರ ನೇತೃತ್ವದಲ್ಲಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಹಾಗೂ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಸಂದರ್ಭದಲ್ಲಿ ರಸ್ತೆ ಬದಿಯ ಹಾಗೂ ರಸ್ತೆ ಮಧ್ಯದಲ್ಲಿದ್ದ ನೀರಾವರಿ ಯೋಜನೆಗಳ ಪೈಪ್‌ಲೈನ್‌ಗಳನ್ನು ತೆರವುಗೊಳಿಸುವ ವೇಳೆ ಹಲವು ಕಡೆ ಪೈಪ್‌ಗಳು ಒಡೆದುಹೋಗಿವೆ. ಇದರಿಂದ ರೈತರ ನೀರಾವರಿ ಯೋಜನೆಗಳು ಸ್ಥಗಿತಗೊಂಡಿದ್ದು, ಅಪಾರ ಪ್ರಮಾಣದ ಆರ್ಥಿಕ ನಷ್ಟ ಉಂಟಾಗಿದೆ. ಹಾನಿಗೊಳಗಾದ ರೈತರ ಪೈಪ್‌ಲೈನ್‌ಗಳ ಸಮೀಕ್ಷೆ ನಡೆಸಿ, ನಷ್ಟದ ಅಂದಾಜು ಮಾಡಿ ತಕ್ಷಣ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ರೈತರಿಗೆ ಪರಿಹಾರ ನೀಡದೆ ಕಾಮಗಾರಿ ಮುಂದುವರಿಸಿದರೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಲಾಯಿತು. ಅಮಿತ್ ಮಿರಜೆ, ಅನಿಲ್ ಪಾಟೀಲ, ಜಯಸಿಂಗ್ ಕಾಡಾಪುರೆ, ಬಾಬಾಸಾಹೇಬ ಗುಣಕೆ, ಬಾಲಕೃಷ್ಣ ದಿಸಳೆ, ಇಂದ್ರಜಿತ್ ಘೋರೆ್ಡ, ನೇತಾಜಿ ಕಾಡಾಪುರೆ, ನಂದಕುಮಾರ ರಸಾಳೆ, ಪ್ರಕಾಶ್ ಶಿತೋಳೆ, ಶಾಸ್ತ್ರಿ ಬಾಬರ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.