ಮತದಾನವು ಪ್ರಜಾಪ್ರಭುತ್ವ ನೀಡಿದ ದೊಡ್ಡ ಕೊಡುಗೆ: ದುಂಡಪ್ಪ ತುರಾದಿ

ಕೊಪ್ಪಳ ತಾಲೂಕ ಪಂಚಾಯತಿ ಆವರಣದಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮ 

ಕೊಪ್ಪಳ ಏಪ್ರಿಲ್ 28: ಭಾರತ ದೇಶವು ವಿಶ್ವದ ಅತೀ ದೊಡ್ಡ ಸಂವಿಧಾನ ಹೊಂದಿದ್ದು 18 ವರ್ಷ ತುಂಬಿದ ಪ್ರತಿಯೊಬ್ಬರಿಗೂ ಮತ ಚಲಾಯಿಸಲು ಅವಕಾಶ ನೀಡಿದೆ. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಿ ಸಂವಿಧಾನ ಆಶಯವನ್ನು ಸಾಕಾರಗೊಳಿಸಬೇಕೆಂದು ಕೊಪ್ಪಳ ತಾಲೂಕ ಸ್ವೀಪ್ ಸಮಿತಿಯ ಅಧ್ಯಕ್ಷರು ಹಾಗೂ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರು ಕರೆ ನೀಡಿದರು.ನಮ್ಮ ನಡೆ ಮತಗಟ್ಟೆಯ ಕಡೆ ಕಾರ್ಯಕ್ರಮದ ಪ್ರಯುಕ್ತ ಕೊಪ್ಪಳ ತಾಲೂಕ ಪಂಚಾಯತಿಯ ಮತಗಟ್ಟೆಯ ಮೇಲೆ ಭಾನುವಾರ ಧ್ವಜಾರೋಹಣ ನೇರವೇರಿಸಿ ಅವರು ಮಾತನಾಡಿದರು.

ಮೇ-7ರಂದು ಜರುಗುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ಅಗತ್ಯ ದಾಖಲಾತಿಗಳನ್ನು ತೆಗೆದುಕೊಂಡು ಹೋಗಿ ನಮಗೆ ಸೂಕ್ತ ಎನಿಸುವ ವ್ಯಕ್ತಿಗೆ ಮತ ಚಲಾಯಿಸಬೇಕು. 12ಡಿ ಅಡಿ ನೋಂದಾಯಿಸಿದ್ದ 85 ವರ್ಷ ಮೇಲ್ಪಟ್ಟ ಹಾಗೂ ವಿಶೇಷಚೇತನರಿಗೆ ಮನೆಯಿಂದಲೇ ಮತ ಚಲಾಯಿಸಿದ್ದಾರೆ. ನಾವು ಕೂಡಾ ತಪ್ಪದೇ ಮತ ಚಲಾಯಿಸಿ ಸದೃಢ ಪ್ರಜಾಪ್ರಭುತ್ವ ನಿರ್ಮಾಣಕ್ಕೆ ಕೈಜೊಡಿಸೋಣ ಎಂದರು.  

ಕಳೆದ ಲೋಕಸಭಾ ಚುನಾವಣೆಗಿಂತ ಈ ಬಾರಿ ವಿನೂತನವಾಗಿ ಸ್ವೀಪ್ ಕಾರ್ಯಕ್ರಮಗಳನ್ನು ಜರುಗಿಸುವ ಮೂಲಕ ಜಿಲ್ಲೆಯ ಮತದಾನ ಶೇಕಡಾವಾರು ಪ್ರಮಾಣವನ್ನು ಹೆಚ್ಚಿಸಲು ಆಯೋಗದ ಉದ್ದೇಶವನ್ನು ಈಡೇರಿಸೋಣ. ಮತದಾನ ಪವಿತ್ರವಾದ ಕಾರ್ಯವಾಗಿದ್ದು, ಮತದಾನ ಮೂಲಕ ದೇಶಕ್ಕೆ ದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಪ್ರಜಾಫ್ರಭುತ್ವ ವ್ಯವಸ್ಥೆಯಲ್ಲಿ ಮತದಾನಕ್ಕೆ ಗೌರವವಿದ್ದು, ಪ್ರತಿ ಮತದಲ್ಲಿ ದೇಶದ ಭವಿಷ್ಯವನ್ನು ರೂಪಿಸುವ ಶಕ್ತಿ ಅಡಗಿದೆ ಎಂದರು.ಇದೇ ಸಂದರ್ಭದಲ್ಲಿ ಚುನಾವಣೆ ಆಯೋಗ ಬಿಡುಗಡೆ ಮಾಡಿದ ಪೋಸ್ಟರ್‌ಗಳನ್ನು ಪ್ರದರ್ಶಿಸಲಾಯಿತು. ನಂತರ ಕಡ್ಡಾಯ ಮತದಾನ ಮಾಡಲು ಮತದಾರರ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.  

ಕಾರ್ಯಕ್ರಮದಲ್ಲಿ ಜಿಲ್ಲಾ ಚುನಾವಣಾ ರಾಯಭಾರಿಗಳಾದ ಪೂರ್ಣಿಮಾ ಏಳುಬಾವಿ, ಮೆಹಬೂಬ ಕಿಲ್ಲೆದಾರ, ತಾಲೂಕ ಸ್ವೀಪ್ ನೋಡಲ್ ಅಧಿಕಾರಿ ಹನಮಂತಪ್ಪ, ತಾಲೂಕ ಯೋಜನಾಧಿಕಾರಿ ರಾಜೇಸಾಬ ನದಾಫ್, ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ ಚಿತ್ರಗಾರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ತಾಲೂಕ ಸ್ವೀಪ್ ಸಮಿತಿ ಸದಸ್ಯರಾದ ಬಸವರಾಜ ಬಳಿಗಾರ, ವಿರೇಶ್ ಬಡಿಗೇರ, ತಾಲೂಕ ಪಂಚಾಯತಿ ಸಿಬ್ಬಂದಿಗಳಾದ ಹನಮಂತರಾವ್, ಸುರೇಶ, ಚಂದ್ರಹಾಸ, ಮೆಹಬೂಬ ಪಾಶಾ, ಗೀರೀಶ ಹಾಗೂ ಇತರೆ ಸಿಬ್ಬಂದಿಗಳು ಉಪಸ್ಥಿತರಿದ್ದರು.