ರಾಮ ಪ್ರಾಣ ಪ್ರತಿಷ್ಠಾಪನೆ: ಸರ್ಕಾರ ಮುನ್ನೆಚ್ಚರಿಕೆ ವಹಿಸಲು ವಿಜಯೇಂದ್ರ ಒತ್ತಾಯ

ಬೆಂಗಳೂರು 20: ಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ವೇಳೆ ಕರ್ನಾಟಕದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಬಿ.ಕೆ.ಹರಿಪ್ರಸಾದ್‌ ಅವರು ಸಾಮಾನ್ಯ ವ್ಯಕ್ತಿ ಅಲ್ಲ. ಅಂಥವರು ಅಹಿತಕರ ಘಟನೆಗಳು ನಡೆಯಬಹುದು ಎಂಬ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾಗಿ, ಸರ್ಕಾರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಪೊಲೀಸರು ಹರಿಪ್ರಸಾದ್‌ ಅವರ ವಿಚಾರಣೆ ನಡೆಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹರಿಪ್ರಸಾದ್ ಅವರನ್ನು ಗುರಿ ಮಾಡುತ್ತಿರುವುದು ರಾಜ್ಯ ಸರ್ಕಾರವೋ ಅಥವಾ ಕೇಂದ್ರವೋ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ ಎಂದರು.

ಕಾಂಗ್ರೆಸ್‌ ಗೊಂದಲ, ದ್ವಂದ್ವ ನಿಲುವಿನಲ್ಲಿದೆ. ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ರಾಮಭಕ್ತರ ಕುರಿತ ತಿರಸ್ಕಾರದ ನಡವಳಿಕೆಯನ್ನು ತೋರುತ್ತಿದೆ. ಕರಸೇವಕ ಶ್ರೀಕಾಂತ ಪೂಜಾರಿಯನ್ನು ರಾಜ್ಯ ಸರ್ಕಾರ ದುರುದ್ದೇಶದಿಂದ ಬಂಧಿಸಿತ್ತು. ರಾಜ್ಯದಲ್ಲಿನ ಶಾಂತಿಯುತ ವಾತಾವರಣ ಹಾಳುಗೆಡವಲು ಈ ಬಂಧನ ನಡೆದಿತ್ತು ಎಂದು ಆರೋಪಿಸಿದರು