ವಿಜಯಪುರ: ಪಡಿತರ ಅಕ್ಕಿ ಕಳ್ಳಸಾಗಾಟ ಉಗ್ರ ಸ್ವರೂಪ ಸಾರ್ವಜನಿಕರಲ್ಲಿ ಆಕ್ರೋಶ

ವಿಜಯಪುರ: ಪಡಿತರ ಅಕ್ಕಿ ಕಳ್ಳಸಾಗಾಟ ಉಗ್ರ ಸ್ವರೂಪ ಸಾರ್ವಜನಿಕರಲ್ಲಿ ಆಕ್ರೋಶ Vijayapura: Public outrage over rampant smuggling of ration rice

ವಿಜಯಪುರ 30:  ಪಡಿತರ ಚೀಟಿ ಅಕ್ಕಿಯ ಕಳ್ಳಸಾಗಾಟವು ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದು, ಇದು ಈಗ ಸಂಘಟಿತ ಅಕ್ರಮ ಜಾಲವಾಗಿ ರೂಪುಗೊಂಡಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಈ ಅಕ್ರಮ ಚಟುವಟಿಕೆಗಳು ಈಗ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಆಡಳಿತದ ಕಾರ್ಯಕ್ಷಮತೆ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ.ಸರ್ಕಾರ ಬಡವರಿಗಾಗಿ ಪ್ರತಿ ರೇಷನ್ ಅಂಗಡಿಗಳಲ್ಲಿ 10 ಕೆಜಿ ಅಕ್ಕಿಯನ್ನು ವಿತರಿಸುತ್ತಿರುವಾಗ, ಕೆಲವೆಡೆ ಜನರು ಅಕ್ಕಿಯನ್ನು ಪಡೆದುಕೊಳ್ಳದೇ ಅದರ ಬದಲಾಗಿ ಕೇವಲ 17 ರೂಪಾಯಿಯನ್ನು ಪಡೆದುಕೊಂಡು ಅಕ್ಕಿಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಇನ್ನೂ ಕೆಲವು ಕಡೆಗಳಲ್ಲಿ ಪಡಿತರ ಅಕ್ಕಿಯನ್ನು 17 ರೂಪಾಯಿ ಪ್ರತಿ ಕೆಜಿ ದರದಲ್ಲಿ ದಲ್ಲಾಳಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ಅಕ್ರಮದಲ್ಲಿ ಮಧ್ಯವರ್ತಿಗಳ ಜಾಲ ಸಕ್ರಿಯವಾಗಿದ್ದು, ಸಣ್ಣ ವಾಹನಗಳ ಮೂಲಕ ಅಕ್ಕಿಯನ್ನು ಸಂಗ್ರಹಿಸಿ ವಿವಿಧ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. 

ಇಂತಹ ರೀತಿಯಲ್ಲಿ ಸಂಗ್ರಹಿಸಲಾದ ಅಕ್ಕಿಯನ್ನು ದೊಡ್ಡ ಪ್ರಮಾಣದಲ್ಲಿ ಗೋದಾಮುಗಳಲ್ಲಿ ಸಂಗ್ರಹಿಸಿ, ನಂತರ ಟ್ರಕ್‌ಗಳ ಮೂಲಕ ಪ್ರತಿದಿನ ಸುಮಾರು 250 ರಿಂದ 350 ಕ್ವಿಂಟಲ್‌ವರೆಗೆ ಗುಜರಾತ್ ಕಡೆಗೆ ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಗಂಭೀರ ಮಾಹಿತಿ ಲಭ್ಯವಾಗಿದೆ. ಈ ಅಕ್ರಮಕ್ಕಾಗಿ ಹಲವಾರು ಮಂದಿಯನ್ನು ನಿಯೋಜಿಸಲಾಗಿದ್ದು, ಅವರಿಗೆ ಹಣ ನೀಡಿ ವ್ಯವಸ್ಥಿತವಾಗಿ ದಂಧೆ ನಡೆಸಲಾಗುತ್ತಿದೆ. ಸಾಮಾನ್ಯ ನಾಗರಿಕರು ಈ ಅಕ್ರಮವನ್ನು ತಡೆಗಟ್ಟಲು ಮುಂದಾದರೆ ಅಥವಾ ಸಂಬಂಧಿತ ಇಲಾಖೆಗೆ ಮಾಹಿತಿ ನೀಡಲು ಯತ್ನಿಸಿದರೆ, ದಂಧೆಗಾರರಿಂದ ಬೆದರಿಕೆ ಹಾಕಲಾಗುತ್ತಿರುವ ಘಟನೆಗಳೂ ವರದಿಯಾಗಿವೆ. ಇದರಿಂದಾಗಿ ಜನರು ಭಯಭೀತರಾಗಿದ್ದು, ಕಳ್ಳಸಾಗಾಟ ನಿರಂತರವಾಗಿ ನಡೆಯಲು ಅವಕಾಶವಾಗುತ್ತಿದೆ.ಈ ನಡುವೆ ಈಗಾಗಲೇ ಸುಮಾರು 50 ವಾಹನಗಳ ಮೇಲೆ ಈಋ ದಾಖಲಾಗಿದ್ದರೂ ಕೂಡ, ಪ್ರತಿದಿನ 100ಕ್ಕೂ ಹೆಚ್ಚು ವಾಹನಗಳು ಬೆಂಗಳೂರು ಬೈಪಾಸ್ ಹಾಗೂ ಸೋಲಾಪುರ್ ಬೈಪಾಸ್ ಮುಖಾಂತರ ನಿರ್ಬಂಧವಿಲ್ಲದೆ ಸಂಚರಿಸುತ್ತಿರುವುದು ಪರಿಸ್ಥಿತಿಯ ಗಂಭೀರತೆಯನ್ನು ತೋರಿಸುತ್ತದೆ.