ಭಾಷೆಗೂ ಮೊದಲು ಹುಟ್ಟಿದ್ದು ಚಿತ್ರಕಲೆ: ಕವಿತಾ ತಿಮ್ಮಾಪೂರ

ಭಾಷೆಗೂ ಮೊದಲು ಹುಟ್ಟಿದ್ದು ಚಿತ್ರಕಲೆ: ಕವಿತಾ ತಿಮ್ಮಾಪೂರ  Painting Originated Before Language: Kavita Thimmapura

ಲೋಕದರ್ಶನ ವರದಿ 

ಜಮಖಂಡಿ, ಜು.15: ಆದಿಮಾನವರು ಗುಡ್ಡಗಾಡು ಪ್ರದೇಶಗಳಲ್ಲಿ ಬದುಕುತ್ತಿದ್ದ ಕಾಲದಲ್ಲೇ ಗುಹೆಗಳ ಗೋಡೆಗಳ ಮೇಲೆ ಚಿತ್ರಗಳನ್ನು ಬಿಡಿಸುವ ಮೂಲಕ ತಮ್ಮ ಜೀವನ ಶೈಲಿಯನ್ನು ದಾಖಲಿಸಿದ್ದರು. ಆದ್ದರಿಂದ ಭಾಷೆ ಹುಟ್ಟುವ ಮುನ್ನವೇ ಚಿತ್ರಕಲೆ ಅಸ್ತಿತ್ವದಲ್ಲಿತ್ತು ಎಂದು ಕವಿತಾ ತಿಮ್ಮಾಪೂರ ಹೇಳಿದರು.  

ನಗರದ ಮಹೇಶ್ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಹಿರಿಯ ಕಲಾವಿದ ಬಸವರಾಜ ಎಸ್‌. ಪಾಟೀಲ ಅವರಿಂದ ಆಯೋಜಿಸಿದ್ದ ನಿಸರ್ಗ ಚಿತ್ರಣ ಪ್ರಾತ್ಯಕ್ಷಿಕೆ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.  

ಚಿತ್ರಕಲೆ ಪ್ರಕೃತಿಯ ಸೌಂದರ್ಯವನ್ನು ಬಣ್ಣಗಳ ಮೂಲಕ ಜೀವಂತವಾಗಿ ಮೂಡಿಸುವ ಕಲೆ. ವಿದ್ಯಾರ್ಥಿಗಳು ಈ ಕಲೆಯನ್ನು ಅಭ್ಯಾಸ ಮಾಡಿ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಹಿರಿಯ ಕಲಾವಿದ ಬಸವರಾಜ ಎಸ್‌. ಪಾಟೀಲ ಮಾತನಾಡಿ, ತಾವು ಕಲಿತ ಕಲೆಯನ್ನು ಮುಂದಿನ ಪೀಳಿಗೆಗೆ ಹಂಚಿದಾಗ ಮಾತ್ರ ಅದರ ಸಾರ್ಥಕತೆ ಸಿಗುತ್ತದೆ. ಇಲ್ಲವಾದರೆ ಕಲೆ ನಮ್ಮೊಂದಿಗೆ ಅಂತ್ಯವಾಗುತ್ತದೆ ಎಂದರು.  

ವಿದ್ಯಾರ್ಥಿಗಳು ಚಿತ್ರಕಲೆ, ರಂಗೋಲಿ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಕಲಾದೇವಿಯ ಕೃಪೆ ಪಡೆಯಬೇಕಾದರೆ ನಿರಂತರ ಅಭ್ಯಾಸ ಮತ್ತು ಪರಿಶ್ರಮ ಅಗತ್ಯ ಎಂದು ಹೇಳಿದರು.  

ಚಿತ್ರಕಲಾ ಶಿಕ್ಷಕ ರಮೇಶ್ ಚವ್ಹಾಣ ಮಾತನಾಡಿ, ವಾಟರ್ ಕಲರ್ ಚಿತ್ರಕಲೆ ಅತ್ಯಂತ ಸವಾಲಿನ ಕಲೆಯಾಗಿದೆ. ಶಾಲೆ-ಕಾಲೇಜುಗಳಲ್ಲಿ ಶಿಕ್ಷಕರು ನೀಡುವ ಮಾರ್ಗದರ್ಶನವನ್ನು ಅನುಸರಿಸಿ ನಿರಂತರ ಅಭ್ಯಾಸ ಮಾಡಿದರೆ ಮಾತ್ರ ಉತ್ತಮ ಕಲಾವಿದರಾಗಲು ಸಾಧ್ಯ ಎಂದರು.  

ಕಾಲೇಜಿನ ಪ್ರಾಚಾರ್ಯ ಕೇಶವ ರಾಠೋಡ್ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಜಿ.ವಿ. ಹಂಪಣ್ಣವರ ಹಾಗೂ ನಿವೃತ್ತ ಉಪನ್ಯಾಸಕ ಎಚ್‌.ಎಂ. ವಿಶ್ವನಾಥ ಉಪಸ್ಥಿತರಿದ್ದರು.