ವಚನಗಳು ಬದುಕಿಗೆ ದಾರೀದೀಪ: ಶ್ರೀ ಬಸವಶಾಂತಲಿಂಗ ಸ್ವಾಮೀಜಿ

ವಚನಗಳು ಬದುಕಿಗೆ ದಾರೀದೀಪ: ಶ್ರೀ ಬಸವಶಾಂತಲಿಂಗ ಸ್ವಾಮೀಜಿ  Vachanas are a guiding light for life: Sri Basavashantalinga Swamiji

ಹಾವೇರಿ, ಸೆ.4: ನಗರದ ಹೊಸಮಠದಲ್ಲಿ ಬಸವ ಕೇಂದ್ರ, ಶ್ರೀಹೊಸಮಠ ಹಾವೇರಿ, ಶರಣ ಸಂಗಮ ಹಾಗೂ ಶ್ರಾವಣ-ಸಂಭ್ರಮದ ವಿಶೇಷ ಕಾರ್ಯಕ್ರಮ ನಡೆಯಿತು.  ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಶ್ರೀಮಠದ ಶ್ರೀಗಳಾದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮನುಷ್ಯನ ಬದುಕು ಕೇವಲ ಲೌಕಿಕ ಸಂಪತ್ತಿನ ಭಾಗವಾಗದೆ, ಆಧ್ಯಾತ್ಮಿಕ ಜ್ಞಾನ ಸಂಪತ್ತಿನ ಮೂಲಕ ಶೃಂಗಾರಗೊಳ್ಳಬೇಕು ಎಂದು ಶರಣರ ವಚನಗಳಲ್ಲಿ ತಿಳಿಸಲಾಗಿದೆ ಎಂದರು.  

ಶ್ರಾವಣ ಎಂದರೆ ಕಿವಿಗಳಿಗೆ ಸದಾಚಾರ, ಸದ್ಗುಣಗಳ ಮಾತುಗಳನ್ನು ಕೇಳಿಸಿ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳುವ ಅವಧಿಯಾಗಿದೆ. ಭಾರತ ಬಹು ಸಂಸ್ಕೃತಿಗಳ ಹಾಗೂ ಬಹುಧರ್ಮಗಳ ನೆಲೆಬೀಡಾಗಿದ್ದು, ವಿವಿಧ ಜಾತಿ-ಮತ-ಪಂಥಗಳ ಜನರು ಇಲ್ಲಿ ಒಗ್ಗಟ್ಟಿನಿಂದ ಬದುಕುತ್ತಿದ್ದಾರೆ. ಸಂಘರ್ಷ ಹೆಚ್ಚಾಗದಂತೆ ಸಾಮರಸ್ಯದಿಂದ ಬದುಕುವಲ್ಲಿ ಭಕ್ತಿ ಪಂಥದ ಕೊಡುಗೆ ಮಹತ್ವದ್ದಾಗಿದೆ ಎಂದು ಹೇಳಿದರು.  

ಪ್ರಾಚೀನ ಕರ್ನಾಟಕದಲ್ಲಿ ಬೌದ್ಧ, ಜೈನ, ಹಿಂದೂ, ಶೈವ, ವೈಷ್ಣವ, ಲಿಂಗಾಯತ ಸೇರಿದಂತೆ ವಿವಿಧ ಧರ್ಮಗಳ ಅನುಯಾಯಿಗಳು ಭಕ್ತಿ-ಶ್ರದ್ಧೆಯೊಂದಿಗೆ ನೀತಿ ಪ್ರಸಾರ ಮಾಡುತ್ತ ಬಂದಿದ್ದಾರೆ. ದಾಸರ ಕೀರ್ತನೆಗಳು, ಜಾನಪದ ಹಾಗೂ ತತ್ವಪದಗಳು ಲೋಕನೀತಿಯನ್ನು ಬೋಧಿಸಿವೆ. ಅದರಲ್ಲೂ ವಚನ ಸಾಹಿತ್ಯ ಸಾಮಾನ್ಯ ಜನರ ಆಡುಭಾಷೆಯಾದ ಕನ್ನಡದಲ್ಲಿ ಅಂದಿನ ತಲ್ಲಣಗಳಿಗೆ ಪರಿಹಾರದ ರೂಪದಲ್ಲಿ ರಚನೆಯಾಗಿದ್ದು, ಅವುಗಳ ಸಂದೇಶಗಳು ಸುಲಭವಾಗಿ ನೆನಪಿನಲ್ಲಿ ಉಳಿಯುವಂತಿವೆ. ಹೀಗಾಗಿ ವಚನಗಳು ಜನಮಾನಸದಲ್ಲಿ ನೆಲೆನಿಂತಿವೆ ಎಂದು ಶ್ರೀಗಳು ಹೇಳಿದರು.  

ಉಪನ್ಯಾಸ ನೀಡಿದ ಹೊನ್ನಪ್ಪ ಭೋವಿ ಮಾತನಾಡಿ, ಮೂಢನಂಬಿಕೆ ಹಾಗೂ ಕಂದಾಚಾರಗಳ ಬಂಧನದಿಂದ ಹೊರಬಂದು ವಚನಗಳ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವಚನಗಳು ಎಲ್ಲ ಕಾಲದಲ್ಲಿಯೂ ಬದುಕಿಗೆ ಸಹಕಾರಿಯಾಗಿದ್ದು, ಪ್ರತಿಯೊಬ್ಬರಿಗೂ ದಾರೀದೀಪವಾಗಬೇಕು ಎಂದರು.  

ವಕೀಲರ ಸಂಘದ ಅಧ್ಯಕ್ಷ ಎಚ್‌.ಸಿ. ಸಿದ್ದನಗೌಡ್ರ ಮಾತನಾಡಿ, ಶ್ರೀಮಠವು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಮುಖಿ ಸೇವೆಗಳನ್ನು ನಿರಂತರವಾಗಿ ಸಲ್ಲಿಸುತ್ತಿದೆ. 12ನೇ ಶತಮಾನದ ವಚನಗಳಲ್ಲಿ ಮೌಲ್ಯಯುತ ಬದುಕಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಉತ್ತಮ ಬದುಕು ನಡೆಸಿದಾಗ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ. ಶ್ರೀಮಠದ ಕಾರ್ಯಗಳಿಗೆ ಎಲ್ಲರೂ ಸಹಕಾರ ನೀಡಬೇಕು ಎಂದು ಹೇಳಿದರು.  

ಕಾರ್ಯಕ್ರಮದಲ್ಲಿ ವಿಜಯಕುಮಾರ, ಬಸಯ್ಯ ಹಿರೇಮಠ, ಮಹಿಳಾ ಘಟಕದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಸಂತ ಬಾಗೂರು, ಶ್ರೀಮತಿ ವಿರಾಜ ಕೋಟಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.  ಮಲ್ಲಿಕಾರ್ಜುನ ಹಿಂದುಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕನ ಬಳಗದ ಸದಸ್ಯರು ಪ್ರಾರ್ಥಿಸಿದರು. ಜಯದೇವ ಕೆರೂರಿ ಸ್ವಾಗತಿಸಿದರು. ಅನಿತಾ ಉಪ್ಪಲಿ ನಿರೂಪಿಸಿದರು.