ಬೋಧನಾ ಗುಣಮಟ್ಟ ಹೆಚ್ಚಿಸಲು ಎಲ್‌ಎಂಎಸ್ ಬಳಕೆ ಅಗತ್ಯ

ಬೋಧನಾ ಗುಣಮಟ್ಟ ಹೆಚ್ಚಿಸಲು ಎಲ್‌ಎಂಎಸ್ ಬಳಕೆ ಅಗತ್ಯ Use of LMS is essential to enhance the quality of teaching

ಲೋಕದರ್ಶನ ವರದಿ 

ಬೆಳಗಾವಿ, ಆ.5: ಬಸವನಕುಡಚಿಯ ಕೆಎಲ್‌ಇ ಕಾಲೇಜ್ ಆಫ್ ಫಾರ್ಮಸಿಯ ಫಾರ್ಮಾಕಾಗ್ನೋಸಿ ವಿಭಾಗವು, ಡಿಪಾರ್ಟ್ಮಂಟ್ ಆಫ್ ಫಾರ್ಮಸಿ ಎಜುಕೇಶನ್  ಆಶ್ರಯದಲ್ಲಿ "ಕಲಿಕೆ ನಿರ್ವಹಣಾ ವ್ಯವಸ್ಥೆಗಳು  ಡಿಜಿಟಲ್ ಶಿಕ್ಷಣಶಾಸ್ತ್ರದ ಮೂಲಕ ಬೋಧನಾ ಶ್ರೇಷ್ಠತೆಯನ್ನು ಹೆಚ್ಚಿಸುವುದು" ವಿಷಯದ ಕುರಿತು ಒಂದು ದಿನದ ಕಾರ್ಯಾಗಾರವನ್ನು ಬುಧವಾರ ಆಯೋಜಿಸಿತು.  ಕಾರ್ಯಾಗಾರವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಸುನಿಲ್ ಎಸ್‌. ಜಲಾಲ್ಪುರೆ ಉದ್ಘಾಟಿಸಿದರು. ಉಪಪ್ರಾಂಶುಪಾಲರಾದ ಡಾ. ಎಂ. ಬಿ. ಪಾಟೀಲ್, ಡಾ. ಗೀತಾಂಜಲಿ ಸಾಲಿಮಠ, ಡಾ. ಡಿ. ಎನ್‌. ಶಾಸ್ತ್ರಿ, ಡಾ. ಸತೀಶ್ ಎ. ಕವಟಗಿಮಠ, ಡಾ. ಸ್ನೇಹಾ ಪಾಟೀಲ್, ಡಾ. ಅಕ್ಷಯ್ ಪಾಟೀಲ್ ಹಾಗೂ ಕಾಲೇಜಿನ ಅಧ್ಯಾಪಕರು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲ ಡಾ. ಸುನಿಲ್ ಎಸ್‌. ಜಲಾಲ್ಪುರೆ, ಆರೋಗ್ಯ ವೃತ್ತಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಅಧ್ಯಾಪಕರ ನಿರಂತರ ತರಬೇತಿ ಅತ್ಯಗತ್ಯ ಎಂದು ಹೇಳಿದರು. ಬದಲಾಗುತ್ತಿರುವ ಶೈಕ್ಷಣಿಕ ಅಗತ್ಯಗಳಿಗೆ ಅನುಗುಣವಾಗಿ ಶಿಕ್ಷಕರು ಡಿಜಿಟಲ್ ತಂತ್ರಜ್ಞಾನ ಹಾಗೂ ಆಧುನಿಕ ಬೋಧನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು. ಕಲಿಕೆ ನಿರ್ವಹಣಾ ವ್ಯವಸ್ಥೆಗಳು  ಬೋಧನಾ ಪರಿಣಾಮಕಾರಿತ್ವವನ್ನು ಹೆಚ್ಚಿಸುವುದರೊಂದಿಗೆ ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಕೋರ್ಸ್‌ ನಿರ್ವಹಣೆ ಹಾಗೂ ಉನ್ನತ ಶಿಕ್ಷಣದ ಡಿಜಿಟಲ್ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.  

ಫಾರ್ಮಾಕಾಗ್ನೋಸಿ ವಿಭಾಗದ ಮುಖ್ಯಸ್ಥ ಡಾ. ಎಂ. ಬಿ. ಪಾಟೀಲ್ ಸ್ವಾಗತಿಸಿದರು. ಡಿಪಾರ್ಟ್ಮಂಟ್ ಆಫ್ ಫಾರ್ಮಸಿ ಎಜುಕೇಶನ್ನ ಸಂಚಾಲಕಿ ಡಾ. ಗೀತಾಂಜಲಿ ಸಾಲಿಮಠ, ಡಿಒಪಿಇಯ ಉದ್ದೇಶ ಹಾಗೂ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಕಾರ್ಯಕ್ರಮ ಸಂಯೋಜಕ ಡಾ. ಡಿ. ಎನ್‌. ಶಾಸ್ತ್ರಿ ಕಾರ್ಯಾಗಾರದ ಉದ್ದೇಶ ಮತ್ತು ಮಹತ್ವವನ್ನು ಪರಿಚಯಿಸಿದರು. ಡಾ. ಸತೀಶ್ ಎ. ಕವಟಗಿಮಠ ಅಧ್ಯಕ್ಷರನ್ನು ಪರಿಚಯಿಸಿದರು.  

ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಡಾ. ರಮೇಶ್ ಭಂಡಾರಿ ಅವರು "ಕಲಿಕೆ ನಿರ್ವಹಣಾ ವ್ಯವಸ್ಥೆಗಳು: ಅಡಿಪಾಯ" ಕುರಿತು ಉಪನ್ಯಾಸ ನೀಡಿ, ಆಧುನಿಕ ಶಿಕ್ಷಣದಲ್ಲಿ ಎಲ್‌ಎಂಎಸ್ನ ಮೂಲಭೂತ ಅಂಶಗಳನ್ನು ವಿವರಿಸಿದರು. ಡಾ. ಪರೀಕ್ಷಿತ್ ಭಾಂದುರ್ಗೆ ಅವರು "ಕಲಿಕೆ ನಿರ್ವಹಣಾ ವ್ಯವಸ್ಥೆಗಳ ಮೂಲಕ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು" ವಿಷಯದ ಕುರಿತು ಮಾತನಾಡಿ, ಬೋಧನೆ ಮತ್ತು ಕಲಿಕೆಯಲ್ಲಿ ಎಲ್‌ಎಂಎಸ್ನ ಪರಿಣಾಮಕಾರಿ ಬಳಕೆಯನ್ನು ವಿವರಿಸಿದರು.

ಶ್ರೀ ಸ್ವಪ್ನೀಲ್ ದಾಭೋಲ್ಕರ್ ಅವರು "ಎಲ್‌ಎಂಎಸ್ನಲ್ಲಿ ಕೋರ್ಸ್‌ ವಿನ್ಯಾಸ ಮತ್ತು ಪರಿಣಾಮಕಾರಿ ಬಳಕೆ" ಕುರಿತು ಅಧಿವೇಶನ ನಡೆಸಿ, ಗುಣಮಟ್ಟದ ಆನ್ಲೈನ್ ಕೋರ್ಸ್ಗಳ ವಿನ್ಯಾಸ ಹಾಗೂ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಎಲ್‌ಎಂಎಸ್ನ ಉಪಯೋಗವನ್ನು ವಿವರಿಸಿದರು.  ಕಾರ್ಯಾಗಾರದಲ್ಲಿ ವಿವಿಧ ಓಷಧ ಶಿಕ್ಷಣ ಸಂಸ್ಥೆಗಳ ಸುಮಾರು 70 ಮಂದಿ ಅಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿ, ಡಿಜಿಟಲ್ ಬೋಧನಾ ವಿಧಾನಗಳ ಕುರಿತು ಮಾಹಿತಿ ಪಡೆದುಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ಸಹಾಯಕ ಪ್ರಾಧ್ಯಾಪಕಿ ಡಾ. ಸ್ನೇಹಾ ಪಾಟೀಲ್ ವಂದಿಸಿದರು.