ಬಬಲೇಶ್ವರ ಮಠದಲ್ಲಿ ಶರಣ ತತ್ವಗಳ ಅನಾವರಣ

ಬಬಲೇಶ್ವರ ಮಠದಲ್ಲಿ ಶರಣ ತತ್ವಗಳ ಅನಾವರಣ  Unveiling of Sharana principles at Babaleshwara Matha


ವಿಜಯಪುರ, ಆ.30: ಮಠ-ಮಾನ್ಯಗಳ ಪ್ರವಚನ ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಉತ್ತಮ ನಡೆ ಮತ್ತು ಬಸವಾದಿ ಶರಣರ ದಾಸೋಹ ತತ್ವಗಳು ನೆಲೆಗೊಳ್ಳುತ್ತಿವೆ ಎಂದು ಕೈಗಾರಿಕೆ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.  

ಬಬಲೇಶ್ವರ ಪಟ್ಟಣದ ಗುರುಪಾದೇಶ್ವರ ಬೃಹನ್ಮಠದಲ್ಲಿ ಶನಿವಾರ ರಾತ್ರಿ ಶ್ರೀ ಗುರುಪಾದೇಶ್ವರ ಶಿವಯೋಗಿಗಳ 184ನೇ ಮಹಾಗಣಾರಾಧನೆ, ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳ ವಜ್ರಮಹೋತ್ಸವ ಹಾಗೂ ಉತ್ತರಾಧಿಕಾರಿ ಪೂಜ್ಯ ಮಲ್ಲಿಕಾರ್ಜುನ ದೇವರ ಪಟ್ಟಾಧಿಕಾರ ಅಂಗವಾಗಿ ಹಮ್ಮಿಕೊಂಡಿದ್ದ ‘ತಿರಂಗಾ ಬುತ್ತಿ ಯಾತ್ರೆ’ಯನ್ನು ಸ್ವಾಗತಿಸಿ, ಬಳಿಕ ನಡೆದ ಪ್ರವಚನ ಸಮಾರಂಭದಲ್ಲಿ ಅವರು ಮಾತನಾಡಿದರು.  

ವಚನ ಪಿತಾಮಹ ಡಾ. ಫ.ಗು. ಹಳಕಟ್ಟಿ, ಬಂತನಾಳ ಶಿವಯೋಗಿ ಹಾಗೂ ಶಾಂತವೀರ ಶ್ರೀಗಳು ಈ ಭಾಗದ ರತ್ನಗಳಾಗಿದ್ದು, ಪ್ರಸ್ತುತ ಮಹಾದೇವ ಶ್ರೀಗಳು ಅವರ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಮಠ-ಮಾನ್ಯಗಳ ಸೇವೆಗೆ ತಮ್ಮ ಸಹಕಾರ ನಿರಂತರವಾಗಿರಲಿದೆ ಎಂದು ಸಚಿವರು ಭರವಸೆ ನೀಡಿದರು.  

ಮಹಿಳೆಯರು ತ್ರಿವರ್ಣ ಧ್ವಜದ ಬಣ್ಣದ ಉಡುಪು ಧರಿಸಿ ಬುತ್ತಿ ಹೊತ್ತು ತಂದಿದ್ದು, ಅದರಲ್ಲಿನ ಮಾನವೀಯತೆ ಮತ್ತು ಸಮಾನತೆಯ ಸಂದೇಶ ಶ್ಲಾಘನೀಯ. 1008 ಜನರು ರಕ್ತದಾನ ಮಾಡುತ್ತಿರುವುದು ಅಭಿನಂದನೀಯ. ಪ್ರವಚನ ಹಾಗೂ ಪುರಾಣಗಳು ಇಂತಹ ಸಾಮಾಜಿಕ ಬದಲಾವಣೆಗೆ ಕಾರಣವಾಗಬೇಕು ಎಂದರು.  

ಬಸವಣ್ಣನವರು ಮಾನವೀಯತೆ ಮತ್ತು ಸಮಾನತೆಯ ಯುಗದ ಪ್ರವರ್ತಕರಾಗಿದ್ದು, ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿದ ಸತ್ಯಕ್ಕ ಹಾಗೂ ಗೋಗ್ಗವ್ವ ಅವರೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.  

ಅಭಿನವ ಸಿದ್ಧಾರೂಢ ಶ್ರೀಗಳು ಮಾತನಾಡಿ, ಸಚಿವ ಎಂ.ಬಿ. ಪಾಟೀಲ ಅವರು ಮಳೆಯ ನೀರನ್ನು ರೈತರಿಗೆ ತಲುಪಿಸಿದ ಸಾಧಕರು. ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯುವಂತೆ ಮಾಡಿದ ಅವರನ್ನು ರೈತರು ಸ್ಮರಿಸುತ್ತಾರೆ. ಶರಣ ಪರಂಪರೆಯನ್ನು ಮುಂದುವರಿಸುತ್ತಿರುವ ಪಾಟೀಲರ ಕಾರ್ಯ ಶ್ಲಾಘನೀಯ ಎಂದರು.  

ಡಾ. ಮಹಾದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಮಣಗೊಳಿಯ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು, ಮಲ್ಲಿಕಾರ್ಜುನ ದೇವರು, ಮೈಸೂರಿನ ನಿರಂಜನ ದೇವರು, ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.