ಬೀದಿ ನಾಯಿ ಕಚ್ಚಿ ಇಬ್ಬರು ಮಕ್ಕಳು ಗಂಬೀರ ಗಾಯ

ಬೀದಿ ನಾಯಿ ಕಚ್ಚಿ ಇಬ್ಬರು ಮಕ್ಕಳು ಗಂಬೀರ ಗಾಯ Two children seriously injured after being bitten by a stray dog


ಲೋಕದರ್ಶನ ವರದಿ  

ಇಂಡಿ  08:  ನಗರದಲ್ಲಿ ಬೀದಿ ನಾಯಿಗಳ ಕಾಟ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರು ಹಾಗೂ ಪುಟ್ಟ ಮಕ್ಕಳು ರಸ್ತೆಗಿಳಿಯಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಶುಕ್ರವಾರ ಬೀದಿ ನಾಯಿಗಳು ಇಬ್ಬರು ಅಮಾಯಕ ಮಕ್ಕಳ ಮೇಲೆ ಭೀಕರವಾಗಿ ದಾಳಿ ನಡೆಸಿ ರಕ್ತಸಿಕ್ತಗೊಳಿಸಿರುವ ಆಘಾತಕಾರಿ ಘಟನೆ ಸಂಭವಿಸಿದೆ. ನಗರದ ರೇವಪ್ಪನಮಡ್ಡಿ ಹಾಗೂ ಕರೀಂ ನಗರದಲ್ಲಿ ಈ ಘಟನೆಗಳು ನಡೆದಿವೆ.ರೇವಪ್ಪನಮಡ್ಡಿಯ ಗುತ್ತೇದಾರ ಲೇಓಟ್‌ನಲ್ಲಿ ವಾಸಿಸುವ 9 ವರ್ಷದ ಬಾಲಕಿ ಪ್ರೇರಣಾ ಗೌಳಿ ತನ್ನ ಮನೆಯ ಮುಂದೆ ಎಂದಿನಂತೆ ಆಟವಾಡುತ್ತಿದ್ದಳು.

ಈ ವೇಳೆ ಹಠಾತ್ತನೆ ನುಗ್ಗಿದ ಬೀದಿ ನಾಯಿಯೊಂದು ಬಾಲಕಿಯ ಮೇಲೆ ಧಾವಿಸಿ ಭೀಕರವಾಗಿ ದಾಳಿ ಮಾಡಿದೆ. ನಾಯಿಯ ದಾಳಿಯಿಂದಾಗಿ ಬಾಲಕಿ ಪ್ರೇರಣಾಳ ಮುಖ ಹಾಗೂ ಕಣ್ಣಿನ ಕೆಳಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸದ್ಯ ಗಾಯಾಳು ಬಾಲಕಿಯನ್ನು ಇಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.ಅಲ್ಲದೆ ಕರೀಂ ನಗರದಲ್ಲೂ ಬೀದಿ ನಾಯಿಗಳ ಕಾಟ ಮುಂದುವರಿದಿದೆ. 

5 ವರ್ಷದ ಬಾಲಕ ತೈಮೂರ್ ಮಕಾನದಾರ್ ಎಂಬ ಬಾಲಕ ಮನೆಯ ಸಮೀಪದ ಅಂಗಡಿಗೆ ತಿನ್ನಲು ಕುರಕುರೆ ತರಲು ತೆರಳುತ್ತಿದ್ದಾಗ ಬೀದಿ ನಾಯಿ ಆತನ ಮೇಲೂ ದಾಳಿ ಮಾಡಿದೆ. ಬಾಲಕನ ಕೈಗೆ ಬಲವಾಗಿ ಕಚ್ಚಿ ಗಾಯಗೊಳಿಸಿದೆ. ಈ ಬಾಲಕನಿಗೂ ಸಹ ಸದ್ಯ ಇಂಡಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಒಂದೇ ದಿನ ಪಟ್ಟಣದ ಬೇರೆ ಬೇರೆ ಕಡೆಗಳಲ್ಲಿ ಇಬ್ಬರು ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿರುವುದು ಸ್ಥಳೀಯ ನಾಗರಿಕರನ್ನು ಕೆರಳಿಸಿದೆ.

ನಗರಸಭೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಬುಧವಾರ ಗುರುವಾರವೂ ಸಹ ನಾಯಿಗಳು ಮಕ್ಕಳಿಗೆ ಕಚ್ಚಿದ್ದು ರಹಿಮಾನ ಜಾತಗಾರ 7 ವರ್ಷ, ಜುನೇದ ತಾಂಬೂಳೆ 6, ಗುರುನಾಥ ಬಿಲ್ಲಾಡಿ 67 ವರ್ಷ, ಅಂಬಾದಾಸ್ ತಳವಾರ 22 ಸೇರಿದಂತೆ ಇನ್ನೂ ಹಲವರಿಗೆ ನಾಯಿಗಳು ಕಚ್ಚಿವೆ.ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಬೀದಿ ನಾಯಿಗಳನ್ನು ಹತೋಟಿಗೆ ತರಲು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.