ಕುರ್ಲಾದಲ್ಲಿ ಗಣೇಶ ಮೂರ್ತಿ ಕುಸಿತ: ಇಬ್ಬರಿಗೆ ಗಾಯ

ಕುರ್ಲಾದಲ್ಲಿ ಗಣೇಶ ಮೂರ್ತಿ ಕುಸಿತ: ಇಬ್ಬರಿಗೆ ಗಾಯ Two Injured as 15-Foot Ganesh Idol Collapses During Transport in Kurla

ಮುಂಬೈ, ಸೆ. 9 : ಗಣೇಶೋತ್ಸವಕ್ಕಾಗಿ ಸಾಗಿಸಲಾಗುತ್ತಿದ್ದ 15 ಅಡಿ ಎತ್ತರದ ಗಣೇಶ ಮೂರ್ತಿ ಕುಸಿದು ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿರುವ ಘಟನೆ ಮುಂಬೈನ ಕುರ್ಲಾ ಪಶ್ಚಿಮದ ಎಲ್‌ಬಿಎಸ್ ರಸ್ತೆಯ ಶೀತಲ್ ತಲಾವ್ ಬಳಿ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮಂಗಳವಾರ ತಡ ಸಂಜೆ ಈ ಘಟನೆ ಸಂಭವಿಸಿದೆ. ಧಾರಾವಿಯ ಪ್ರೇಮ್‌ನಗರದಲ್ಲಿರುವ ಓಂ ಶಕ್ತಿ ಮಿತ್ರ ಮಂಡಳಿಗೆ ಸೇರಿದ ಗಣೇಶ ಮೂರ್ತಿಯನ್ನು ವಿದ್ಯಾವಿಹಾರ್ ಬೈಲ್ ಬಜಾರ್‌ನ ವಿ.ಬಿ. ನಗರದಲ್ಲಿರುವ ಕಾರ್ಯಾಗಾರದಿಂದ ಧಾರಾವಿಗೆ ಸಾಗಿಸಲಾಗುತ್ತಿತ್ತು.

ಶೀತಲ್ ತಲಾವ್ ಬಳಿ ಸ್ಪೀಡ್ ಬ್ರೇಕರ್ ದಾಟುವ ವೇಳೆ ಮೂರ್ತಿಯನ್ನು ಸಾಗಿಸುತ್ತಿದ್ದ ಟ್ರಾಲಿ ನಿಯಂತ್ರಣ ಕಳೆದುಕೊಂಡು ಅಸಮತೋಲನಗೊಂಡಿದೆ. ಪರಿಣಾಮ ಗಣೇಶ ಮೂರ್ತಿ ರಸ್ತೆಗೆ ಉರುಳಿ ಬಿದ್ದು, ಭಾರೀ ಪ್ರಮಾಣದಲ್ಲಿ ಹಾನಿಗೊಳಗಾಗಿದೆ. ಇದರಿಂದ ಭಕ್ತರು ಹಾಗೂ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು.

ಗಾಯಗೊಂಡವರನ್ನು ಸಂತೋಷ್ ಜೈಸ್ವಾಲ್ (28) ಮತ್ತು ರೋಹಿತ್ ಜೈಸ್ವಾಲ್ (25) ಎಂದು ಗುರುತಿಸಲಾಗಿದೆ. ಇವರಲ್ಲಿ ಒಬ್ಬರನ್ನು ಕುರ್ಲಾ ಭಾಭಾ ಆಸ್ಪತ್ರೆಗೆ ಹಾಗೂ ಮತ್ತೊಬ್ಬರನ್ನು ಹಬೀಬ್ ಆಸ್ಪತ್ರೆಗೆ ದಾಖಲಿಸಲಾಯಿತು. ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಘಟನೆಯ ಬಳಿಕ ಮಂಡಳಿಯ ಪ್ರತಿನಿಧಿಗಳು ಪೊಲೀಸರು ಹಾಗೂ ಸ್ಥಳೀಯ ಆಡಳಿತದ ಸಹಕಾರದೊಂದಿಗೆ ಹಾನಿಗೊಳಗಾದ ಗಣೇಶ ಮೂರ್ತಿಯನ್ನು ಶೀತಲ್ ತಲಾವ್‌ನಲ್ಲಿ ಧಾರ್ಮಿಕ ವಿಧಿವಿಧಾನಗಳಂತೆ ವಿಸರ್ಜಿಸಿದರು.

ಘಟನೆ ಕುರಿತು ವಿನೋಬಾ ಭಾವೆ ನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.