ಬೆಂಗಳೂರು,ಜ 23 : ಯಾರು ದೇಶಕ್ಕೆ ದ್ರೋಹ ಬಗೆಯುತ್ತಾರೋ, ಯಾರು ಪಾಕಿಸ್ತಾನ ಪರವಾಗಿರುತ್ತಾರೆ ಅಂತಹವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಮಾಜಿ ಗೃಹ ಸಚಿವ ಹಾಗೂ ಹಾಲಿ ಕಂದಾಯ ಸಚಿವ ಆರ್.ಅಶೋಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಸುಭಾಶ್ ಚಂದ್ರ ಬೋಸ್ ಜನ್ಮದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಕಾನೂನು ಎಲ್ಲರಿಗೂ ಒಂದೇ. ಕಳ್ಳ ಕಳ್ಳನೇ. ಅವನು ಯಾವ ಧರ್ಮದವನೇ ಆಗಿರಲಿ. ಪಾಕಿಸ್ತಾನದ ಪ್ರೇರಣೆಯಿಂದ ಅಲ್ಲಿ ತರಬೇತಿ ಪಡೆದು ಹಿಂದೂವೇ ಉಗ್ರವಾದ ಮಾಡಿದರೆ, ಅವನನ್ನು ಅದೇ ರೀತಿ ನೋಡುತ್ತೇವೆ ಎಂದು ತಿಳಿಸಿದರು.
ನಮ್ಮ ದೇಶದ ಸೈನಿಕರನ್ನು ಕೊಲ್ಲುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಅದರಲ್ಲಿ ಯಾವುದೇ ಮುಲಾಜು ಇಲ್ಲ. ಪಾಕಿಸ್ತಾನ ಧ್ವಜ ಕಂಡರೆ ನಮಗೆ ಸಿಟ್ಟು ಬರುತ್ತದೆ. ಪಾಕಿಸ್ತಾನದ ಪರವಾಗಿರುವ ಹಿಂದೂವೇ ಆಗಲಿ, ಕ್ರೈಸ್ತ, ಮುಸ್ಲಿಂ ಯಾರೇ ಆಗಲಿ ಅವರು ಕ್ಷಮೆಗೆ ಅರ್ಹರಲ್ಲ. ಪಾಕಿಸ್ತಾನ ನಮ್ಮ ವೈರಿ ರಾಷ್ಟ್ರ. ಸದಾ ನಮ್ಮದೇಶವನ್ನು ನಾಶ ನಾಡಲು ಹೊರಟಿರುವ ದೇಶ. ಆ ದೇಶವನ್ನು ಮಟ್ಟ ಹಾಕುವ ಕೆಲಸ ಮಾಡುವುದು ನಮ್ಮ ಕರ್ತವ್ಯ. ಅದನ್ನು ನಾವು ಮಾಡುತ್ತೇವೆ ಎಂದರು.
ಎಚ್ ಡಿಕೆ ವಿರುದ್ಧ ಕಿಡಿ: ಮಂಗಳೂರು ಬಾಂಬ್ ಪ್ರಕರಣದಲ್ಲಿ ನಾವೀಗ ಜಾಗರೂಕತೆಯಿಂದ ತನಿಖೆ ಮಾಡುವ ಪರ್ವದಲ್ಲಿ ಇದ್ದೇವೆ. ಏನೇ ತನಿಖೆ ಮಾಡಿದರೂ ಅದನ್ನು ನಾಟಕ, ಅಣುಕು ಪ್ರದರ್ಶನ ಎನ್ನಲಾಗುತ್ತಿದೆ. ಸಿನಿಮಾಗಳಂತೆ ಇದೀಗ ಪೊಲೀಸರನ್ನು ಸಹ ವ್ಯಂಗ್ಯವಾಗಿ ಬಿಂಬಿಸಲಾಗುತ್ತಿದೆ ಎಂದು ಎಚ್.ಡಿ. ಕುಮಾರ ಸ್ವಾಮಿ ವಿರುದ್ಧ ಕಿಡಿ ಕಾರಿದರು.
ಈಗ ಸಿನಿಮಾ ನಿರ್ಮಾಪಕರಾದ ಕುಮಾರಸ್ವಾಮಿ, ಪೊಲೀಸ್ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಪೊಲೀಸರು ಬೇಕಾಗಿದ್ದರು. ಅದರೆ ಅಧಿಕಾರದಿಂದ ಇಳಿದ ತಕ್ಷಣ ಅವರಿಗೆ ಪೊಲೀಸರು ವಿಲನ್ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಂಗಳೂರು ಬಾಂಬ್ ಪ್ರಕರಣದ ಆರೋಪಿ ಸಿಕ್ಕಿ ಬಿದ್ದಿದ್ದಾರೆ. ಕಾಂಗ್ರೆಸ್ ಶಾಸಕ ಎನ್.ಎ. ಹ್ಯಾರೀಸ್ ಮೇಲಾದ ದಾಳಿ ಕೂಡ ಖಂಡನೀಯ. ಅವರು ಆದಷ್ಟು ಬೇಗ ಗುಣ ಮುಖರಾಗಲಿ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಲೇ ಏನಾದರು ಹೇಳಿದರೆ ಅದು ಪಟಾಕಿ ಅಂತ ಕುಮಾರಸ್ವಾಮಿ ಹೇಳುತ್ತಾರೆ. ಹ್ಯಾರೀಸ್ ಮೇಲಿನ ದಾಳಿ ಹಿಂದೆ ಕುತಂತ್ರ ಇದೆ. ಪೂರ್ವ ನಿಯೋಜಿತ ಎಂಬಂತೆ ಕಾಣುತ್ತಿದೆ ಎಂದು ವಿವರಿಸಿದರು.
ಅಲ್ಪ ಸಂಖ್ಯಾತರ ಮತವನ್ನು ಜೆಡಿಎಸ್ ಪರ ಬರುವಂತೆ ಮಾಡಬೇಕು ಎಂಬ ಉದ್ದೇಶ ಕುಮಾರಸ್ವಾಮಿ ಅವರಿಗೆ ಇರಬಹುದು. ಓಲೈಕೆ ಮಾಡುವ ಮುಂಚೆ ಯೋಚನೆ ಮಾಡಬೇಕು. ಇಲ್ಲವಾದರೆ ಅಪಹಾಸ್ಯಕ್ಕೆ ಈಡಾಗಬೇಕಾಗುತ್ತದೆ ಎಂದರು.
ಯಾವುದೇ ಧರ್ಮದವರಾದರು ಅವರು ತಪ್ಪು ಮಾಡಿದವನು ಆರೋಪಿಯೇ. ಅವನಿಗೆ ಶಿಕ್ಷೆ ಆಗಲೇಬೇಕು. ವಿಮಾನ ನಿಲ್ದಾಣಕ್ಕೆ ಪದೇ ಪದೆ ಬೆದರಿಕೆ ಹಾಕುವವನಿಗೆ ಖಾಯಂ ಆಗಿ ಶಿಕ್ಷೆ ಆಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಆದಿತ್ಯ ರಾವ್ ಮಾನಸಿಕ ಅಸ್ವಸ್ಥ ಎಂಬ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಆತ ಮಾನಸಿಕ ಸ್ಥಿತಿ ಬಗ್ಗೆ ವೈದ್ಯರು ದೃಢೀಕರಿಸಬೇಕು. ಆರೋಪಿಯ ಹೇಳಿಕೆ ನೋಡಿದರೆ ಹಾಗೆ ಅನಿಸುತ್ತದೆ. ಡಬಲ್ ಡಿಗ್ರಿ ಆದರೂ ಕೆಲಸ ಇಲ್ಲ. ಮನೆಯವರೂ ಅವನನ್ನು ದೂರ ಮಾಡಿದ್ದಾರೆ. ಅವನಿಗೆ ಮಾನಸಿಕವಾಗಿ ಏನೋ ಸಮಸ್ಯೆ ಇರಬಹುದು. ಈ ಬಗ್ಗೆ ತನಿಖೆ ಆದ ಬಳಿಕ ಗೊತ್ತಾಗುತ್ತದೆ. ಅವನನ್ನು ಯಾವುದೇ ರೀತಿ ಕ್ಷಮಿಸುವ ಪ್ರಶ್ನೆಯೇ ಇಲ್ಲ. ಗೃಹ ಸಚಿವರಿಗೆ ಈ ಬಗ್ಗೆ ಮಾಹಿತಿ ಇದೆ ಅದಕ್ಕಾಗಿ ಹೀಗೆ ಹೇಳುತ್ತಿರಬಹುದು ಎಂದು ವಿವರಿಸಿದರು.