ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದು: ಡಾ. ರಾಜೇಂದ್ರ ಗಡಾದ್

ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಮಹತ್ವದ್ದು: ಡಾ. ರಾಜೇಂದ್ರ ಗಡಾದ್  The role of youth is crucial in building an addiction-free society: Dr. Rajendra Gadad

ಗದಗ, ಆ.5: ವ್ಯಸನ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಆರೋಗ್ಯವಂತ ಹಾಗೂ ಸದೃಢ ಯುವ ಸಮುದಾಯವೇ ದೇಶದ ಅಭಿವೃದ್ಧಿಗೆ ಆಧಾರ ಎಂದು ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಡಾ. ರಾಜೇಂದ್ರ ಎಸ್‌. ಗಡಾದ್ ಹೇಳಿದರು.  

ನಗರದ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯ ಹಾಗೂ ಪಂ. ಪಂಚಾಕ್ಷರಿ ಗವಾಯಿಗಳವರ ಕಲಾ ಮಹಾವಿದ್ಯಾಲಯ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮುಖ್ಯ ಉಪನ್ಯಾಸ ನೀಡಿದರು.  

ಯುವಜನರು ವ್ಯಸನಗಳಿಂದ ದೂರವಿದ್ದರೆ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ. ತಂಬಾಕು ಹಾಗೂ ಇತರೆ ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ಅನಾರೋಗ್ಯ, ಆರ್ಥಿಕ ನಷ್ಟ ಮತ್ತು ಸಾಮಾಜಿಕ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ವ್ಯಸನ ಮುಕ್ತ ಜೀವನವೇ ಆರೋಗ್ಯಕರ ಕುಟುಂಬ ಹಾಗೂ ಸದೃಢ ಸಮಾಜದ ಅಡಿಪಾಯ ಎಂಬ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.  

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಪಂ. ಪಂಚಾಕ್ಷರಿ ಗವಾಯಿಗಳವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ರಾಜಶೇಖರ ದಾನರೆಡ್ಡಿ ಮಾತನಾಡಿ, ಸಮಾಜ ಸುಧಾರಕರಾದ ಡಾ. ಮಹಾಂತ ಶಿವಯೋಗಿಗಳ ಆದರ್ಶಗಳನ್ನು ಯುವಕರು ಅನುಸರಿಸಿ ವ್ಯಸನಗಳಿಂದ ದೂರವಿರುವ ಸಂಕಲ್ಪ ಮಾಡಬೇಕು ಎಂದರು.  

ಅಧ್ಯಕ್ಷತೆ ವಹಿಸಿದ್ದ ಪಂ. ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ನಾರಾಯಣ ವಿ. ಅಕ್ಕಸಾಲಿ ಮಾತನಾಡಿ, ವ್ಯಸನವು ವ್ಯಕ್ತಿಯೊಬ್ಬನ ಸಮಸ್ಯೆಯಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜದ ಮೇಲೂ ಗಂಭೀರ ಪರಿಣಾಮ ಬೀರುತ್ತದೆ. ಆದ್ದರಿಂದ ವ್ಯಸನ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಡಾ. ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ವ್ಯಸನ ಮುಕ್ತ ಪ್ರತಿಜ್ಞೆ ಸ್ವೀಕರಿಸಿ, ಜಾಗೃತಿ ಘೋಷಣೆಗಳನ್ನು ಕೂಗಿ ಅರಿವು ಮೂಡಿಸಿದರು.  

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನಡೆಯಿತು. ಡಾ. ವಿ.ವಿ. ಹಿರೇಮಠ ಸ್ವಾಗತಿಸಿದರು. ಡಾ. ಹನುಮಂತ ಬಿ. ಹೂಗಾರ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಬಸಯ್ಯ ಎಸ್‌. ಗಡ್ಡದಮಠ ವಂದಿಸಿದರು. ಕಾರ್ಯಕ್ರಮದಲ್ಲಿ ಎರಡೂ ಮಹಾವಿದ್ಯಾಲಯಗಳ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.