ಧಾರವಾಡ - ಹುಬ್ಬಳ್ಳಿ

ಜಾನಪದ ಕಲೆ ಉಳಿಸುವಲ್ಲಿ ಯುವಪೀಳಿಗೆ ಪಾತ್ರ ಮುಖ್ಯ: ಸವಿತಾ ಅಮರಶೆಟ್ಟಿ

ಜಾನಪದ ಕಲೆ ಉಳಿಸುವಲ್ಲಿ ಯುವಪೀಳಿಗೆ ಪಾತ್ರ ಮುಖ್ಯ: ಸವಿತಾ ಅಮರಶೆಟ್ಟಿ

ಲೋಕದರ್ಶನ ವರದಿ 

ಧಾರವಾಡ 06 :  ಜಾನಪದವು ನಮ್ಮ ನೆಲದ ಬದುಕಿನ ಅನುಭವ, ಜ್ಞಾನ, ನಂಬಿಕೆಗಳು ಹಾಗೂ ಕಲಾ ಪರಂಪರೆಯ ಪ್ರತಿಬಿಂಬವಾಗಿದೆ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.  

ಕೋಟಬಾಗಿ ಗ್ರಾಮದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆವರಣದಲ್ಲಿ ಡಾ. ಎಸ್‌.ಎಸ್‌. ಜೀವಣ್ಣವರ ಎಜುಕೇಷನ್ ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಜಾನಪದ ಕಲಾ ಸಂಭ್ರಮ-2026 ಉದ್ಘಾಟಿಸಿ ಅವರು ಮಾತನಾಡಿದರು.  

ಜನರ ಬದುಕಿನಿಂದ ಹುಟ್ಟಿದ ಜಾನಪದ ಸಾಹಿತ್ಯ ಮತ್ತು ಕಲೆಗಳು ತಲೆಮಾರಿನಿಂದ ತಲೆಮಾರಿಗೆ ಸಾಗುತ್ತಾ ಇಂದಿಗೂ ಜೀವಂತವಾಗಿವೆ. ಭಾರತೀಯ ಸಂಸ್ಕೃತಿಯ ಆಚರಣೆಗಳು ಮತ್ತು ಪರಂಪರೆಗಳಲ್ಲಿ ಜಾನಪದದ ಮಹತ್ವ ಅಪಾರವಾಗಿದೆ ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಜನರ ಬದುಕಿನ ವಿವಿಧ ಆಯಾಮಗಳನ್ನು ಪ್ರತಿಬಿಂಬಿಸುವ ಜಾನಪದವು ನಮ್ಮ ನೆಲದ ಮೂಲ ತತ್ವಗಳೊಂದಿಗೆ ಬೆಸೆದುಕೊಂಡಿದ್ದು, ಇಂದಿಗೂ ತನ್ನ ಅಸ್ತಿತ್ವ ಉಳಿಸಿಕೊಂಡಿದೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಪಬ್ಬಜೋತಿಪಾಲಿವಿಜ್ಞಾನಿ, ಸವಿತಾ ಅಮರಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ ಸೇರಿದಂತೆ ಹಲವರಿಗೆ ‘ಶ್ರೀಜೀವಮಾನ ಸಾಧನಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.  

ಕೋಟಬಾಗಿ ಉಡಚಮ್ಮದೇವಿ ಭಜನಾ ಸಂಘದ ಕಲಾವಿದರು, ವಿವಿಧ ಕಲಾವಿದರು ಹಾಗೂ ಸರ್ಕಾರಿ ಶಾಲಾ ಮಕ್ಕಳು ಜಾನಪದ ಕಲಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಡಾ. ಎಸ್‌.ಎಸ್‌. ಜೀವಣ್ಣವರ ಎಜುಕೇಷನ್ ಟ್ರಸ್ಟ್‌ ಅಧ್ಯಕ್ಷ ಪ್ರವೀಣ ಜೀವಣ್ಣವರ ಸ್ವಾಗತಿಸಿದರು. ಶಿಕ್ಷಕ ಬಸನಗೌಡ ಗೌಡಣ್ಣವರ ವಂದಿಸಿದರು. ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. 


ಸುದ್ದಿ ಓದಿ