ಯುವಕರ ಶಕ್ತಿಯೇ ದೇಶದ ಶಕ್ತಿ: ಎಂ.ವೈ. ಮಾಳಿ

ಯುವಕರ ಶಕ್ತಿಯೇ ದೇಶದ ಶಕ್ತಿ: ಎಂ.ವೈ. ಮಾಳಿ  The power of the youth is the power of the nation: M.Y. Mali

ಮುಧೋಳ, ಆ.19: ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಯುವಕರ ಶಕ್ತಿಯೇ ದೇಶದ ಶಕ್ತಿಯಾಗಿದ್ದು, ಯುವಕರ ಶಕ್ತಿಗಿಂತ ದೊಡ್ಡ ಶಕ್ತಿ ಮತ್ತೊಂದಿಲ್ಲ ಎಂದು ನಗರದ ಆರ್‌ಎಂಜಿ ಪದವಿ ಪೂರ್ವ ಮಹಾವಿದ್ಯಾಲಯದ ಆಂಗ್ಲಭಾಷಾ ಉಪನ್ಯಾಸಕ ಎಂ.ವೈ. ಮಾಳಿ ಹೇಳಿದರು.  

ಬಾಗಲಕೋಟೆ ಬಿವಿವಿ ಸಂಘದ ನಗರದ ಶ್ರೀ ಎಸ್‌.ಆರ್‌. ಕಂಠಿ ಮಹಾವಿದ್ಯಾಲಯದ ಕಲಾ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ ‘ನವಪರ್ವ-2026’ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಜೀವನದ ಗುರಿಯನ್ನು ಸ್ಪಷ್ಟವಾಗಿ ರೂಪಿಸಿಕೊಳ್ಳಬೇಕು. ಶಿಕ್ಷಣ ಪೂರ್ಣಗೊಂಡ ಬಳಿಕ ಯಾವ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬುದನ್ನು ನಿರ್ಧರಿಸಿಕೊಂಡು, ತಮ್ಮ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಗುರುತಿಸಿಕೊಳ್ಳುವುದೇ ಶಿಕ್ಷಣದ ಮೂಲ ಉದ್ದೇಶವಾಗಿದೆ ಎಂದರು.  

ಪ್ರತಿಯೊಬ್ಬರಲ್ಲಿಯೂ ಒಂದಲ್ಲೊಂದು ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಬೆಳೆಸಲು ಕಾಲೇಜಿನಲ್ಲಿ ಹಲವು ಅವಕಾಶಗಳಿದ್ದು, ವಿದ್ಯಾರ್ಥಿಗಳು ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಜ್ಞಾನಕ್ಕೆ ಪರ್ಯಾಯವಾದ ಶಕ್ತಿ ಮತ್ತೊಂದಿಲ್ಲ. ಆತ್ಮವಿಶ್ವಾಸ, ಉತ್ತಮ ಸಹವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದರ ಜೊತೆಗೆ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.  

ಕಾಲೇಜಿನ ಪ್ರಾಚಾರ್ಯ ಡಾ. ಮಲ್ಲಿಕಾರ್ಜುನ ಜರಕುಂಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣದಿಂದ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಜೊತೆಗೆ ಪರಸ್ಪರರನ್ನು ಪ್ರೀತಿಯಿಂದ ಕಾಣುವ ಮನೋಭಾವ ಬೆಳೆಸಬೇಕು. ಪ್ರತಿಯೊಬ್ಬರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವಾಗಬೇಕು. ವಿದ್ಯಾರ್ಥಿಗಳು ಧೈರ್ಯಶಾಲಿಗಳಾಗಿ, ಸುತ್ತಮುತ್ತಲಿನವರನ್ನು ಪ್ರೀತಿಸಿ, ತಂದೆ-ತಾಯಿ ಹಾಗೂ ಶಿಕ್ಷಕರನ್ನು ಗೌರವಿಸಿ, ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಬೇಕು ಎಂದರು.  

ಕಲಾ ವಿಭಾಗದ ಮುಖ್ಯಸ್ಥ ಡಾ. ಲೋಕೇಶ ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಅಜ್ಜಪ್ಪ ಕಡುರ್ ಹಾಗೂ ಕಲಾ ವಿಭಾಗದ ವಿವಿಧ ವಿಷಯಗಳ ಮುಖ್ಯಸ್ಥರು ವೇದಿಕೆಯಲ್ಲಿದ್ದರು.  

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಿಂದ ಮನರಂಜನಾ ಕಾರ್ಯಕ್ರಮಗಳು ನಡೆದವು. ರಮ್ಯಾ ದೇವದಾಸ ಮತ್ತು ರಾಧಿಕಾ ಡೋಣಿ ನಿರೂಪಿಸಿದರು. ನಾಗರತ್ನ ಯರಗುಡ್ರಿ ಸ್ವಾಗತಿಸಿದರು. ದುರ್ಗಪ್ಪ ಲಚ್ಚವ್ವಗೋಳ ಪ್ರಾರ್ಥನಾ ಗೀತೆ ಹಾಡಿದರು. ಅಕ್ಷತಾ ಬಂಡಾರ ವಂದಿಸಿದರು.