ಮನಶಾಂತಿ ನೀಡುವ ಏಕೈಕ ಕಲೆ ಎಂದರೆ ಅದು ಸಂಗೀತ ಮಾತ್ರ : ಆಶಾ ಯಮಕನಮರಡಿ
The only art that gives peace of mind is music: Asha Yamakanamaradi
ಲೋಕದರ್ಶನ ವರದಿ
ಬೆಳಗಾವಿ, 16 : ಸಂಗೀತ ಎನ್ನುವುದು ಮನಶಾಂತಿ ನೀಡುವ ಏಕೈಕ ಕಲಾ ಮಾಧ್ಯಮ ಎಂದು ಲೇಖಕಿ ಆಶಾ ಯಮಕನಮರಡಿ ಹೇಳಿದರು. ಟಿಳಕವಾಡಿಯ ನಾದಸುಧಾ ಸುಗಮ ಸಂಗೀತ ಶಾಲೆಯ ವತಿಯಿಂದ ರವಿವಾರ ನಾದಸುಧಾ ಸಂಗೀತ ಶಾಲೆಯ ಸಭಾಗೃಹದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಪ್ರತಿಭಾ ಪುರಸ್ಕಾರ ವಿಜೇತ ಶ್ರೇಯಾ ಮನವಾಡಿ ಅವರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೀತ ಎನ್ನುವುದು ಈ ಜಗತ್ತಿನಲ್ಲಿ ಶಾಶ್ವತವಾದ ಕಲೆಯಾಗಿದೆ. ಅದಕ್ಕೆ ಎಂದಿಗೂ ಸಾವಿಲ್ಲ. ಆದರೆ ಇಂದು ಎಐ ಪ್ರವೇಶದಿಂದ ಸಂಗೀತ ಕಲೆಗೂ ಭಯ ಆವರಿಸಿದೆ. ಮನಸ್ಸಿಗೆ ಮುದ ನೀಡುವ ಏಕೈಕ ಕಲೆ ಇದ್ದರೆ ಅದು ಸಂಗೀತ ಮಾತ್ರ. ಹೀಗಾಗಿ ಅದನ್ನು ಉಳಿಸಿ ಬೆಳೆಸುವ ಕಾರ್ಯ ಆಗಬೇಕು ಎಂದು ಅವರು ಹೇಳಿದರು.
ನಾದ ಸುಧಾ ಸಂಗೀತ ಸುಗಮ ಸಂಗೀತ ಶಾಲೆಯ ಮೂಲಕ ನಿವೃತ್ತ ಬ್ಯಾಂಕ್ ಅಧಿಕಾರಿ ಸತ್ಯನಾರಾಯಣ ಅವರು ಬೆಳಗಾವಿಯ ಮಕ್ಕಳಿಗೆ ಸಂಗೀತವನ್ನು ಕಲಿಸುವ ಕೆಲಸವನ್ನು ಕಳೆದ 16 ವರ್ಷಗಳಿಂದ ಮಾಡುತ್ತಿದ್ದಾರೆ. ಅವರು ಬೆಳಗಾವಿ ಪರಿಸರದಲ್ಲಿ ನೀಡುತ್ತಿರುವ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿರುತ್ತವೆ. ಮುಂದಿನ ಪೀಳಿಗೆಗೆ ಸಂಗೀತ ಹರಿದು ಬರಬೇಕು ಎಂಬ ಆಶಯ ಅವರದ್ದಾಗಿದೆ. ಈ ನಿಟ್ಟಿನಲ್ಲಿ ಎಷ್ಟೇ ಸವಾಲುಗಳು ಎದುರಾದರೂ ಅದನ್ನು ನಿಭಾಯಿಸಿಕೊಂಡು ಸತ್ಯನಾರಾಯಣ ಅವರು ಈ ಭಾಗದಲ್ಲಿ ಸಂಗೀತ ದೊಡ್ಡ ವೃಕ್ಷವಾಗಿ ಬೆಳೆಯಬೇಕು ಎಂಬ ಆಶಯದಿಂದ ಮಕ್ಕಳಿಗೆ ಸಂಗೀತ ವಿದ್ಯೆಯನ್ನು ಕಲಿಸುತ್ತಿರುವುದು ನಿಜಕ್ಕೂ ಸಂತಸದ ಸಂಗತಿ ಎಂದರು.
ಪುಟ್ಟ ಮಕ್ಕಳಿಗೆ ಅತ್ಯಂತ ಜವಾಬ್ದಾರಿಯುತವಾಗಿ ಅವರು ಸಂಗೀತವನ್ನು ಕಲಿಸಿಕೊಡುತ್ತಿದ್ದಾರೆ. ದೇಶಭಕ್ತಿ ಗೀತೆ, ಭಕ್ತಿ ಗೀತೆ, ಭಾವಗೀತೆ ಮುಂತಾದ ಎಲ್ಲಾ ಪ್ರಕಾರದ ಗೀತೆಗಳನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ. ತಂತ್ರಜ್ಞಾನ ಇಂದು ಸಾಕಷ್ಟು ಮುಂದುವರಿದಿದೆ. ಮುಂದೆ ಸಂಗೀತ ಇರುತ್ತದೆ ಇಲ್ಲವೋ ಎಂಬ ಭೀತಿ ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಈ ಕಲೆಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು.
ಸಂಗೀತವನ್ನು ಪ್ರತಿಯೊಬ್ಬರು ಆರಾಧಿಸುತ್ತಾರೆ. ಮಗು ಸ್ವರಬದ್ಧವಾಗಿ ಕಲಿತರೆ ಅದೇ ಗುರುವಿಗೆ ಸಂತೃಪ್ತಿ. ಆ ನಿಟ್ಟಿನಲ್ಲಿ ಸತ್ಯನಾರಾಯಣ ಅವರು ಮಕ್ಕಳಿಗೆ ಸಂಗೀತ ಕಲಿಸುತ್ತಿದ್ದು ಗುರುವನ್ನು ಮೀರಿಸುವ ಶಿಷ್ಯಂದಿರು ತಯಾರಾಗಬೇಕು ಎನ್ನುವುದು ಅವರ ಕನಸು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೆ ಆಳವಾಗಿ ಸಂಗೀತವನ್ನು ಕಲಿಸುವ ಮೂಲಕ ಬಹುದೊಡ್ಡ ಗಾಯಕರಾಗಿ ದೊಡ್ಡ ವೇದಿಕೆ ಏರಿ ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳಗಾವಿ ಪ್ರತಿಭೆಗಳು ಹೊರಹೊಮ್ಮಬೇಕು ಎಂಬ ಕನಸು ಅವರದ್ದಾಗಿದೆ ಎಂದರು.
ಸಂಗೀತ ವಿದ್ವಾನ್ ಎಂ.ಜಿ.ರಾವ್ ಮಾತನಾಡಿ, ನಾದಸುಧಾ ಮೂಲಕ ಸತ್ಯನಾರಾಯಣ ಅವರು ಬೆಳಗಾವಿಯ ಪ್ರತಿಭೆಗಳಿಗೆ ಒಂದೂವರೆ ದಶಕದಿಂದ ಪ್ರೋತ್ಸಾಹ ನೀಡುತ್ತಿದ್ದು ವಿದ್ಯಾರ್ಥಿಗಳು ಅತ್ಯಂತ ಆಳವಾಗಿ ಸಂಗೀತ ಕಲಿಯಬೇಕು ಎಂದರು.
ನಾದ ಸುಧಾ ಸಂಗೀತ ಸುಗಮ ಸಂಗೀತ ಶಾಲೆಯ ಸಂಸ್ಥಾಪಕ ಎಂ.ಎಸ್. ಸತ್ಯನಾರಾಯಣ ಮಾತನಾಡಿ, ನಾದಸುಧಾ ಸುಗಮ ಸಂಗೀತ ಶಾಲೆಯ ಮೂಲಕ ಶ್ರೇಷ್ಠ ಪ್ರತಿಭೆಗಳು ಅರಳಿದ್ದಾರೆ. ಇನ್ನಷ್ಟು ಪ್ರತಿಭೆಗಳನ್ನು ಹೊರತರಬೇಕು ಎನ್ನುವುದು ನಮ್ಮ ಸುಗಮ ಸಂಗೀತ ಶಾಲೆಯ ಮುಖ್ಯ ಧ್ಯೇಯವಾಗಿದೆ ಎಂದರು.
ನಾದ ಸುಧಾ 16 ವರ್ಷಗಳ ಸಂಗೀತ ಪಯಣದ ಸಾಕ್ಷ್ಯ ಚಿತ್ರದ ಹಾಡನ್ನು ಮುಖ್ಯ ಅತಿಥಿ ಆಶಾ ಯಮಕನಮರಡಿ ಬಿಡುಗಡೆ ಮಾಡಿದರು. ಇತ್ತೀಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 2025-26 ಸಾಲಿನ ಪ್ರತಿಭಾ ಪುರಸ್ಕಾರ ಪಡೆದ ಶ್ರೇಯಾ ಮನವಾಡೆ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಶಿಕ್ಷಕಿ ಪೂರ್ಣಿಮಾ ಪತ್ತಾರ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 