ಆಧ್ಯಾತ್ಮ ಜ್ಞಾನ ನೀಡುವ ದೀವಟಿಗೆಯಂತೆ ಈಶ್ವರೀಯ ವಿಶ್ವವಿದ್ಯಾಲಯ

ಆಧ್ಯಾತ್ಮ ಜ್ಞಾನ ನೀಡುವ ದೀವಟಿಗೆಯಂತೆ ಈಶ್ವರೀಯ ವಿಶ್ವವಿದ್ಯಾಲಯ  The Divine University is like a torchbearer imparting spiritual knowledge


 ಹೂವಿನಹಡಗಲಿ 06:  ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಮಾನವ ಕುಲಕ್ಕೆ ಆಧ್ಯಾತ್ಮ ಜ್ಞಾನದ ಬೆಳಕು ನೀಡುವ ದೀವಟಿಗೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಹ.ಬೊ.ಹಳ್ಳಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಬಸಮ್ಮ ಅಭಿಪ್ರಾಯಪಟ್ಟರು.  

 ಕನ್ನಡ ಸಾಹಿತ್ಯ ಪರಿಷತ್ತು ಹೋಬಳಿ ಘಟಕ ಇಟ್ಟಿಗಿ ಹಾಗೂ ತಾಲೂಕು ಘಟಕ ಹೂವಿನಹಡಗಲಿ ವತಿಯಿಂದ ಇಟ್ಟಿಗಿ ಗ್ರಾಮದ ಶ್ರೀ ಸಿದ್ದೇಶ್ವರ ಜಗದ್ಗುರು ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಶ್ರೀಜಿ.ಬಿ.ಲಿಂಗನಗೌಡರ ಸ್ಮರಣಾರ್ಥ ದತ್ತಿ, ಜ್ಯೋತಿ ಬಸವಪ್ಪ ಸ್ಮರಣಾರ್ಥ ದತ್ತಿ, ಲಕ್ಷ್ಮೀ ನರಸಿಂಹಪ್ಪ ಸುಬ್ರಾಯ ದಿವಾಕರ ಸ್ಮರಣಾರ್ಥ ದತ್ತಿ ಹಾಗೂ ಎನ್‌.ಆರ್‌. ಶಿವನಾಗಪ್ಪಗೌಡ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.  

 ‘ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವಿಚಾರಧಾರೆಗಳು’ ಹಾಗೂ ‘ಶರಣ ಸಂಸ್ಕೃತಿ ಮತ್ತು ಪ್ರಸ್ತುತ ಸಮಾಜ’ ವಿಷಯಗಳ ಕುರಿತು ಮಾತನಾಡಿದ ಅವರು, ಮಾನವ ದೇಹದಲ್ಲಿರುವ ಚೈತನ್ಯಾತ್ಮಕ ಶಕ್ತಿಯೇ ಆತ್ಮ. ದೇಹ ನಶ್ವರವಾಗಿದ್ದು, ಆತ್ಮ ಅವಿನಾಶಿ. ಇಂದ್ರಿಯಗಳ ಮೂಲಕ ಜ್ಞಾನವನ್ನು ಪಡೆಯುವ ಚೈತನ್ಯ ದೇಹಕ್ಕಲ್ಲ, ಆತ್ಮಕ್ಕಿದೆ ಎಂದು ವಿವರಿಸಿದರು.  

 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಾಚಾರ್ಯ ಎಚ್‌. ಮಲ್ಲಿಕಾರ್ಜುನಪ್ಪ, ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ನೈತಿಕತೆ ಹಾಗೂ ಉತ್ತಮ ಗುಣಗಳನ್ನು ಬೆಳೆಸಿಕೊಳ್ಳಲು ಮತ್ತು ನಾಡು-ನುಡಿಯ ಬಗ್ಗೆ ಅಭಿಮಾನ ಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.  

 ಅಧ್ಯಕ್ಷತೆ ವಹಿಸಿದ್ದ ಜಿ.ಬಿ. ವಿನಯರಾಜ ಆಚಾರ್ಯ ಮಾತನಾಡಿ, ವಿದ್ಯಾರ್ಥಿಗಳು ಸತ್ಪ್ರಜೆಗಳಾಗಲು ಈಶ್ವರೀಯ ವಿಶ್ವವಿದ್ಯಾಲಯದ ವಿಚಾರಧಾರೆಗಳು ಅಗತ್ಯವಾಗಿವೆ ಎಂದರು.  

 ವಿದ್ಯಾರ್ಥಿನಿ ಸಿ. ವಿಜಯಲಕ್ಷ್ಮೀ ಪ್ರಾರ್ಥಿಸಿದರು. ಸಿ. ಹೇಮಾ ಸ್ವಾಗತಿಸಿದರು. ಉಪನ್ಯಾಸಕ ಕೆ.ಎಂ. ಮೃತ್ಯುಂಜಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜಯೋಗಿನಿ ಬಸಮ್ಮ ಅವರನ್ನು ಕಸಾಪ ವತಿಯಿಂದ ಗೌರವಿಸಲಾಯಿತು.  

 ಕಾರ್ಯಕ್ರಮದಲ್ಲಿ ವನಜಾಕ್ಷಿ ಅಕ್ಕ, ಜ್ಯೋತಿ ಅಕ್ಕ, ಉಪನ್ಯಾಸಕ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಎಂ.ಎಚ್‌.ಎಂ. ವೇದಮೂರ್ತಿ ವಂದಿಸಿದರು. ವಿದ್ಯಾರ್ಥಿನಿ ಎ. ಭವಾನಿ ಕಾರ್ಯಕ್ರಮ ನಿರ್ವಹಿಸಿದರು.