ಕುಮಟಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಭಯೋತ್ಪಾದನಾ ನಿರ್ಮೂಲನಾ ದಿನಾಚರಣೆ: ಭಯೋತ್ಪಾದನೆ ಎನ್ನುವುದು ಒಂದು ಹಿಂಸಾತ್ಮಕ ಅಪರಾಧ

ಕುಮಟಾ: ಭಯೋತ್ಪಾದನೆ ಎನ್ನುವುದು ಒಂದು ಹಿಂಸಾತ್ಮಕ ಅಪರಾಧ.ಆಧುನಿಕ ಸಮಾಜದ ಪ್ರಮುಖ ಶತೃ ಎಂದು  ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕೃಷ್ಣಾ ನಾಯ್ಕ  ಅಭಿಪ್ರಾಯಪಟ್ಟರು. ಅವರು  ಕುಮಟಾದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ    ಶನಿವಾರ  ಜರುಗಿದ ಭಯೋತ್ಪಾದನಾ ನಿರ್ಮೂಲನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳನ್ನು ಉದ್ಧೇಶಿಸಿ ಮಾತನಾಡಿದರು. 

ಶ್ರೀಲಂಕಾದಲ್ಲಿ ಭಯೋತ್ಪಾದನೆ ವಿರೋಧಿಸಿ, ಅಲ್ಲಿನ ಭಯೋತ್ಪಾದನೆ ಹತ್ತಿಕ್ಕಲು ಭಾರತದ  ಸೈನಿಕರನ್ನು ಶಾಂತಿ ಕಾಪಾಡಲು ಕಳುಹಿಸಿದ ಪರಿಣಾಮವಾಗಿ ಪ್ರಧಾನಿ ರಾಜೀವ್ ಗಾಂಧಿ  ಭಯೋತ್ಪಾದಕರಿಗೆ ಬಲಿಯಾದರು. ಪಕ್ಕದ  ದೇಶವನ್ನು  ಕಾಪಾಡಲು ತನ್ನ  ಜೀವವನ್ನೇ ಪಣಕ್ಕಿಟ್ಟವರು ನಮ್ಮ ಪ್ರಧಾನಿ. ಅವರು ಹುತಾತ್ಮರಾದ ದಿನವನ್ನು ಭಯೋತ್ಪಾದನೆ ವಿರೋಧಿ ದಿನವಾಗಿ ರಾಷ್ಟ್ರದ ಎಲ್ಲೆಡೆ ಆಚರಿಸಲಾಗುತ್ತಿದೆ ಎಂದರು. ಸಮಾಜದ ನೀತಿ ನಿಯಮಗಳನ್ನು ಧಿಕ್ಕರಿಸಿ ವ್ಯವಸ್ಥೆಯನ್ನು ಬುಡಮೇಲು ಮಾಡುವಂತಹ ಇಂತಹ ಸಮಾಜ ಘಾತುಕ ಕೃತ್ಯಗಳನ್ನು ಎಲ್ಲರೂ ವಿರೋಧಿಸುವುದರೊಂದಿಗೆ ನಿರ್ಮೂಲನೆಗಾಗಿ ಪಣತೊಡಬೇಕೆಂದು ಕರೆನೀಡಿದರು. 

ಕಾಲೇಜಿನ ನೂತನ  ಪ್ರಾಂಶುಪಾಲರಾದ  ಪ್ರೊ.ವಿಜಯಾ ಡಿ.ನಾಯ್ಕ ಮಾತನಾಡಿ  ಇಂದಿನ ಯುವ ಪೀಳಿಗೆ ಭಯೋತ್ಪಾದನಾ ಚಟುವಟಿಕೆಗಳಿಗೆ ಸಿಲುಕದೆ,  ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕೆಂದರು.  

ವಿದ್ಯಾರ್ಥಿಗಳು ಭಯೋತ್ಪಾದನಾ ವಿರೋಧಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು. ಪ್ರತಿಜ್ಞಾ ವಿಧಿಯನ್ನು ಉಪನ್ಯಾಸಕ ಮೂರ್ತಿ ಐ.ಆರ್ .ಬೋಧಿಸಿದರು. ಎನ್‌.ಎಸ್‌.ಎಸ್‌.ಸಂಯೋಜನಾಧಿಕಾರಿ ನಾಗರಾಜ್‌.ಬಿ. ಸ್ವಾಗತಿಸಿದರು. ಡಾ.ರಜನಿ ವಂದಿಸಿದರು .ಉಪನ್ಯಾಸಕರಾದ ಡಾ.ಗೀತಾ ನಾಯಕ್, ಡಾ.ರಮ್ಯ, ಮುರುಳೀ ಮೋಹನ್, ಶ್ರೀಕಾಂತ್ ನಾಯ್ಕ, ಶಿಲ್ಪಾ, ನಾಗಮಣಿ ಮುಂತಾದವರು ಉಪಸ್ಥಿತರಿದ್ದರು.