ರಾಯಬಾಗ 17: ಸರ್ಕಾರಿ ಕಾಲೇಜನಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಬೋಧಕರು ಒಳ್ಳೆಯ ಶಿಕ್ಷಣ ಮತ್ತು ಸಂಸ್ಕಾರವನ್ನು ನೀಡಬೇಕೆಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು.
ಶನಿವಾರ ಪಟ್ಟಣದ ಡಾ.ಬಾಬು ಜಗಜೀವನರಾಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ಕಾಲೇಜಿನ ವಿವಿಧ ಘಟಕಗಳ ಸಮಾರೋಪ ಸಮಾರಂಭ ಹಾಗೂ ಬಿ.ಎ, ಬಿ.ಕಾಂ, ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ ಮತ್ತು ಚಿಗುರು ವಾರ್ಷಿಕ ಸಂಚಿಕೆ ಅನಾವರಣಗೊಳಿಸಿ ಮಾತನಾಡಿದ ಅವರು, ಈ ಸರ್ಕಾರಿ ಕಾಲೇಜು, ಖಾಸಗಿ ಕಾಲೇಜಗಳಿಗೆ ಪೈಪೋಟಿ ನೀಡುವ ಮಟ್ಟಗೆ ಬೆಳೆದಿರುವುದು ಹೆಮ್ಮೆ ತಂದಿದೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಏರಬೇಕೆಂದು ಹಾರೈಸಿದರು.
ಅತಿಥಿಗಳಾಗಿ ಆಗಮಿಸಿದ್ದ ಬೆಳಗಾವಿ ರಾಣಿ ಚನ್ನಮ್ಮ ವಿವಿ ಕುಲಸಚಿವ (ಮೌಲ್ಯಮಾಪನ) ಪ್ರೊ.ರವೀಂದ್ರನಾಥ ಕದಮ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಛಲವನ್ನು ಹೊಂದಿದವರು ಎಂತಹ ಸಾಧನೆ ಕೂಡ ಮಾಡುತ್ತಾರೆ. ಸತತ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯವೆಂದರು.
ಸಾಂಸ್ಕೃತಿಕ ಮತ್ತು ಕ್ರೀಡೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಪ್ರಾಚಾರ್ಯ ರಾಜಕುಮಾರ ಕಾಗೆ ಅಧ್ಯಕ್ಷತೆಯನ್ನು ವಹಿಸಿದ್ದರು. ಡಾ.ವಿವೇಕಾನಂದ ಮಾನೆ, ಡಾ.ಶಂಕರ ರಾಠೋಡ, ಎಮ್.ಎಸ್.ಯಾದವಾಡೆ, ಸಂತೋಷ ಸಮಾಜೆ, ಡಾ.ಪ್ರಸಾದ ಆರ್.ಎ., ಡಾ.ವಿಜಯಲಕ್ಷ್ಮೀ ಜಿ, ಅಜೀಜ ಸನದಿ, ಆರ್.ಡಿ.ಮನೋಜ, ಮಾರುತಿ ಹಾಡಕರ, ರವಿ ಚಾನಗಿ ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಡಾ.ವಿವೇಕಾನಂದ ಮಾನೆ ಸ್ವಾಗತಿಸಿದರು. ಎಸ್.ಎಮ್.ಐಹೊಳೆ ನಿರೂಪಿಸಿದರು.