ಶಿಕ್ಷಕರೇ ಭವಿಷ್ಯದ ಶಿಲ್ಪಿಗಳು : ಮೂಗನೂರಮಠ

ಶಿಕ್ಷಕರೇ ಭವಿಷ್ಯದ ಶಿಲ್ಪಿಗಳು : ಮೂಗನೂರಮಠ Teachers are the architects of the future: Mooganuramatha

ಲೋಕದರ್ಶನ ವರದಿ 

ಶಿಕ್ಷಕರೇ ಭವಿಷ್ಯದ ಶಿಲ್ಪಿಗಳು : ಮೂಗನೂರಮಠ 


ಬಾಗಲಕೋಟ  11: ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ನಿರ್ಮಿಸುವ ಹೊಣೆ ಶಿಕ್ಷಕರದ್ದಾಗಿದ್ದು ಅವರು ನೀಡುವ ಜ್ಞಾನ ಮತ್ತು ಮಾರ್ಗದರ್ಶನದ ಮೂಲಕ   ಮೌಲ್ಯಯುತ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಪ್ರಾಚಾರ್ಯರಾದ ಎಸ್‌.ಆರ್‌. ಮೂಗನೂರಮಠ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು 

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಎನ್‌.ಎಸ್‌.ಎಸ್ ಘಟಕ ಒಂದು ಮತ್ತು ಎರಡರ ಸಹಯೋಗದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ​‍್ಾರೆ್ಪಣ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಕರು ನೀಡುವ ಜ್ಞಾನ, ಮಾರ್ಗದರ್ಶನ ಹಾಗೂ ಉತ್ತಮ ಮೌಲ್ಯಗಳು ವಿದ್ಯಾರ್ಥಿಗಳ ಜೀವನಕ್ಕೆ ದಾರೀದೀಪವಾಗುತ್ತವೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವಿಸುವುದರ ಜೊತೆಗೆ ಅವರ ಸಲಹೆ ಮತ್ತು ಮಾರ್ಗದರ್ಶನವನ್ನು ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ನಾಗರಿಕರಾಗಬೇಕು. ಉತ್ತಮ ಅಂಕ ಗಳಿಸುವುದು, ಸಾಧನೆ ಮಾಡುವುದು ಹಾಗೂ ಸುಂದರ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಶಿಕ್ಷಕರಿಗೆ ಸಲ್ಲಿಸುವ ಗೌರವ ಮತ್ತು ಗುರುದಕ್ಷಿಣೆಯಾಗಿದೆ. ತಮ್ಮಲ್ಲಿರುವ ಜ್ಞಾನವನ್ನು ಇತರರೊಂದಿಗೆ ಹಂಚಿಕೊಂಡಾಗ ಜ್ಞಾನ ಮತ್ತಷ್ಟು ವೃದ್ಧಿಯಾಗುತ್ತದೆ ಎಂದು ಹೇಳಿದರು. 

ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು.ರಾಠೋಡ ಅವರು ಮಾತನಾಡಿ  ಶಿಕ್ಷಕ-ವಿದ್ಯಾರ್ಥಿಗಳ ಸಂಬಂಧ ಕೇವಲ ತರಗತಿಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿಲ್ಲ. ಶಿಕ್ಷಕರು ವಿದ್ಯಾರ್ಥಿಗಳ ಜೀವನಕ್ಕೆ ದಿಕ್ಕು ತೋರಿಸುವ ಮಾರ್ಗದರ್ಶಕರಾಗಿದ್ದಾರೆ. ಪಠ್ಯ ವಿಷಯಗಳ ಬೋಧನೆಯ ಜೊತೆಗೆ ಶಿಸ್ತು, ಸಂಸ್ಕಾರ, ಮಾನವೀಯತೆ ಹಾಗೂ ಉತ್ತಮ ಮೌಲ್ಯಗಳನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳಲ್ಲಿ ಕರುಣೆ, ಸಹಾನುಭೂತಿ ಹಾಗೂ ಜ್ಞಾನದ ಮನೋಭಾವ ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಶಿಕ್ಷಕರ ಮಾರ್ಗದರ್ಶನವನ್ನು ಸದುಪಯೋಗಪಡಿಸಿಕೊಂಡು ತಮ್ಮ ಗುರಿ ಸಾಧಿಸಬೇಕು ಎಂದರು. 

ಆಟವಾಡಿ ಸಂಭ್ರಮಿಸಿದ ಶಿಕ್ಷಕರು: ಶಿಕ್ಷಕರ ದಿನಾಚರಣೆ ಅಂಗವಾಗಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉಪನ್ಯಾಸಕರಿಗಾಗಿ ವಿವಿಧ ಮನರಂಜನಾ ಆಟಗಳ ಸ್ಪರ್ಧೆಗಳನ್ನು ಆಯೋಜಿಸಿ ಸಂಭ್ರಮವನ್ನು ಹೆಚ್ಚಿಸಿದರು. ಕಾರ್ಯಕ್ರಮದಲ್ಲಿ ಮ್ಯೂಸಿಕಲ್ ಚೇರ್, ಬ್ಲೈಂಡ್ ಪೊಲ್ಡ್‌, ಬಲೂನ್ ಬ್ಯಾಲೆನ್ಸ್‌  ಮೇಕಿಂಗ್ ಪಿರಾಮಿಡ್, ಮೆಮೊರಿ ಪವರ್ ಸೇರಿದಂತೆ ಹಲವು ಆಟಗಳನ್ನು ನಡೆಸಲಾಯಿತು. ಉಪನ್ಯಾಸಕರು ಉತ್ಸಾಹದಿಂದ ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂತಸದ ಕ್ಷಣಗಳನ್ನು ಹಂಚಿಕೊಂಡರು. ಆಟಗಳ ವೇಳೆ ನಗು, ಸಂಭ್ರಮ ಮತ್ತು ಸ್ನೇಹಪರ ವಾತಾವರಣದಿಂದ ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ವೃದ್ಧಿಗೊಳಿಸಿತು.