ಕಾರವಾರ

ಮನರೇಗಾ ಯೋಜನೆಯ ಲಾಭ ಪಡೆದುಕೊಳ್ಳಿ : ಶಿವಾಜಿ ವಾಸಂಬಿ

ಮನರೇಗಾ ಯೋಜನೆಯ ಲಾಭ ಪಡೆದುಕೊಳ್ಳಿ : ಶಿವಾಜಿ ವಾಸಂಬಿ

ಲೋಕದರ್ಶನ ವರದಿ 

ಕಾರವಾರ, ಮೇ.18 :- ಗ್ರಾಮೀಣ ಭಾಗದ ಜನರು ವಲಸೆ ಹೋಗುವುದನ್ನು ತಪ್ಪಿಸಲು ಹಾಗೂ ಅವರ ವಾಸಸ್ಥಳದಲ್ಲಿಯೇ ಉದ್ಯೋಗ ನೀಡುವುದಕ್ಕಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮೂಲ ಆಶಯವಾಗಿದ್ದು, ಗ್ರಾಮಸ್ಥರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮೈನಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಾಜಿ ವಾಸಂಬಿ ಹೇಳಿದರು. ಅವರು ಸೋಮವಾರ ಮುಂಡಗೋಡ ತಾಲೂಕಿನ ಮೈನಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕವಲಗಿ ಮತ್ತು ಕ್ಯಾತ್ನಳ್ಳಿ ಗ್ರಾಮಗಳಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಡೆದ ಮಾಹಿತಿ ವಿನಿಮಯ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. 

ಜಿಲ್ಲಾ ಐಇಸಿ ಸಂಯೋಜಕ ಕಿರಣ ಜೋತೆಪ್ಪನವರ ಮಾತನಾಡಿ, ಯೋಜನೆಯಡಿ ಅಕುಶಲ ಕೂಲಿಕಾರರಿಗೆ ಲಭ್ಯವಿರುವ ಉದ್ಯೋಗ ಅವಕಾಶ, ವೇತನ, ಕೆಲಸದ ಪ್ರಮಾಣ, ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿ ಬಾಣಂತಿಯರಿಗೆ ಕೆಲಸದಲ್ಲಿ ರಿಯಾಯಿತಿ, ಮಹಿಳೆಯರಿಗೆ ಸಮಾನ ಉದ್ಯೋಗ ಅವಕಾಶದೊಂದಿಗೆ ಸಮಾನ ವೇತನ, ನೇರವಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಸೇರಿದಂತೆ ಜನರಿಗೆ ಉಪಯುಕ್ತ ಮಾಹಿತಿ ನೀಡಿ, ಸದ್ಯ ಕ್ಯಾತ್ನಳ್ಳಿ ಗ್ರಾಮದಲ್ಲಿ ಆರಂಭಿಸಲು ಸಜ್ಜಾಗಿರುವ ಗ್ರಾಮಕ್ಕೆ ಹೊಂದಿಕೊಂಡಿರುವ ಕೃಷಿ ಕಾಲುವೆ ಸಮುದಾಯ ಕಾಮಗಾರಿಯಲ್ಲಿ ಹೆಚ್ಚಿನ ಪಾಲ್ಗೊಳ್ಳುವಂತೆ ತಿಳಿಸಿದರು. ಇದೇ ವೇಳೆ ಎನ್‌.ಎಮ್‌.ಎಮ್‌.ಎಸ್‌. ಫೇಸ್ ಅಥೆಂಟಿಕೇಶನ್ ಹಾಜರಾತಿ, ಇ-ಕೆವೈಸಿ ಪ್ರಕ್ರಿಯೆ ಕುರಿತು ಅರಿವು ಮೂಡಿಸಲಾಯಿತು. ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಅಲೋಕ್ ನಾಯ್ಕ್‌, ತಾಂತ್ರಿಕ ಸಹಾಯಕ ವಿನಾಯಕ ಆಚಾರಿ, ಬಿಎಫ್‌ಟಿ ಮಂಜುನಾಥ ಸಾಗರ, ಕಾಯಕ ಬಂಧು ಆನಂದ ಪೂಜಾರ ಸೇರಿದಂತೆ ಕೂಲಿಕಾರರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. 


ಸುದ್ದಿ ಓದಿ