ಸತತ ಅಧ್ಯಯನದಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಾಧ್ಯ: ಐಪಿಎಸ್ ಅಧಿಕಾರಿ ಬೀರೆದೇವ ಡೋಣಿ
ರಾಯಬಾಗ, ಆ. 23: ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಮಾತೃಭಾಷೆ ಯಾವುದೇ ಅಡ್ಡಿಯಾಗುವುದಿಲ್ಲ. ಸತತ ಅಧ್ಯಯನ, ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಯಾವುದೇ ಸಾಧನೆಯನ್ನು ಮಾಡಬಹುದು ಎಂದು ಮಹಾರಾಷ್ಟ್ರದ ಯಮಗೆ ಗ್ರಾಮದ ಯುವ ಐಪಿಎಸ್ ಅಧಿಕಾರಿ ಬೀರೆದೇವ ಡೋಣಿ ಹೇಳಿದರು.
ಪಟ್ಟಣದ ಮಹಾವೀರ ಭವನದಲ್ಲಿ ಶನಿವಾರ ರಾಯಣ್ಣ ಷ್ಯಹಿಷ್ಲ್ಘ್ಥ್ಲೂ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಸಾಧಕರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮೊದಲ ಪ್ರಯತ್ನದಲ್ಲಿ ಸೋತರೂ ಹೆದರದೆ ಸತತ ಪ್ರಯತ್ನದ ಮೂಲಕ ಸೋಲನ್ನು ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಂಡು ಮುನ್ನಡೆಯಬೇಕು. ಇಂದಿನ ವಿದ್ಯಾರ್ಥಿಗಳು ಮೊಬೈಲ್ನಿಂದ ದೂರವಿದ್ದು ಅಧ್ಯಯನದ ಕಡೆ ಹೆಚ್ಚಿನ ಗಮನ ಹರಿಸಬೇಕು. ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಪ್ರತಿನಿತ್ಯ ಗಮನ ಹರಿಸಿದಾಗ ಮಾತ್ರ ಅವರು ಉನ್ನತ ಸಾಧನೆ ಮಾಡಲು ಸಾಧ್ಯ ಎಂದು ಸಲಹೆ ನೀಡಿದರು.
ಸಾಧನೆ ಮಾಡುವವರಿಗೆ ಬಡತನ ಅಡ್ಡಿಯಾಗುವುದಿಲ್ಲ. ಉತ್ತಮ ಆರೋಗ್ಯದೊಂದಿಗೆ ಒಳ್ಳೆಯ ಸ್ನೇಹಿತರ ಒಡನಾಟ ಹೊಂದಿದ್ದರೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಶಾಸಕ ಡಿ.ಎಂ.ಐ. ಹೊಳೆ ಮಾತನಾಡಿ, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ನೀಡಬೇಕು ಎಂದು ಹೇಳಿದರು. ಮಾಜಿ ಶಾಸಕ ಪಿ. ರಾಜೀವ್ ಮಾತನಾಡಿ, ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿರುವ ಬೀರೆದೇವ ಡೋಣಿ ಅವರ ಸಾಧನೆ ನಮ್ಮ ಮಕ್ಕಳಿಗೆ ಪ್ರೇರಣೆಯಾಗಬೇಕು ಎಂದರು.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಉಚಿತ ತರಬೇತಿ
ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಮಾತನಾಡಿ, ತಾಲ್ಲೂಕಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ರಾಯಣ್ಣ ಷ್ಯಹಿಷ್ಲ್ಘ್ಥ್ಲೂ ಫೌಂಡೇಶನ್ ವತಿಯಿಂದ ಉಚಿತ ತರಬೇತಿ ನೀಡಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಕವಲಗುಡ್ಡ ಆಶ್ರಮದ ಅಮರೇಶ್ವರ ಮಹಾರಾಜರು ಮಾತನಾಡಿ, ದೇವಸ್ಥಾನಗಳಿಗೆ ನೀಡುವ ಹಣಕ್ಕಿಂತ ಹೆಚ್ಚಿನ ಹಣವನ್ನು ಗ್ರಂಥಾಲಯಗಳಿಗೆ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಬೇಕು. ಯಾವುದೇ ವ್ಯಕ್ತಿಯನ್ನು ಜಾತಿಯ ಆಧಾರದ ಮೇಲೆ ಗುರುತಿಸದೆ, ಅವರ ಸಾಧನೆಯ ಮೂಲಕ ಗುರುತಿಸಬೇಕು ಎಂದು ಹೇಳಿದರು.
ರಾಯಣ್ಣ ಷ್ಯಹಿಷ್ಲ್ಘ್ಥ್ಲೂ ಫೌಂಡೇಶನ್ ಸಂಸ್ಥಾಪಕ ಸದಾಶಿವ ದೇಸಿಂಗೆ ಮಾತನಾಡಿ, ತಮ್ಮ ಸಂಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ನೀಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಬೀರೆದೇವ ಡೋಣಿ ಅವರ ಪಾಲಕರನ್ನು ನೋಡಿ ಕಲಿಯಬೇಕು. ಕೋವಿಡ್ ನಂತರ ಫೌಂಡೇಶನ್ನ ಚಟುವಟಿಕೆಗಳು ಸ್ವಲ್ಪ ಹಿನ್ನಡೆಯಾಗಿದ್ದರೂ, ಇದೀಗ ಮತ್ತೆ ಸಾಮಾಜಿಕ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಇಂಚಗೇರಿ ಆಧ್ಯಾತ್ಮಿಕ ಸಂತ ಶಶಿಕಾಂತ ಗುರೂಜಿ, ತಹಶೀಲ್ದಾರ್ ಮಹಾದೇವ ಸನಮೂರಿ, ವೈದ್ಯ ಡಾ. ಮಹೇಂದ್ರ ಒಡೆಯರ್, ಡಿ.ಸಿ. ಸದಲಗಿ, ಬಸನಗೌಡ ಆಸಂಗಿ, ಡಾ. ಎಸ್.ಎಸ್. ಬಾನೆ, ರಾಮು ನಿಶಾನದಾರ, ಪ್ರಸಾದ ದೇಸಿಂಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಶಿಕ್ಷಕ ರಮೇಶ ಘಂಟಿ ಕಾರ್ಯಕ್ರಮ ನಿರೂಪಿಸಿದರು. ಬಿ.ಎಲ್. ಘಂಟಿ ವಂದಿಸಿದರು.