ಕಂಪ್ಲಿಯಲ್ಲಿ ಶ್ರೀಕೃಷ್ಣ ಜಯಂತ್ಯೋತ್ಸವ ಆಚರಣೆ

ಕಂಪ್ಲಿಯಲ್ಲಿ ಶ್ರೀಕೃಷ್ಣ ಜಯಂತ್ಯೋತ್ಸವ ಆಚರಣೆ  Sri Krishna Jayanti celebrations in Kampli

ಲೋಕದರ್ಶನ ವರದಿ  

ಕಂಪ್ಲಿ, ಸೆ.04: ಹಿಂದೂ ಧರ್ಮೀಯರು ಶ್ರೀಕೃಷ್ಣನನ್ನು ಆರಾಧಿಸುವ ಹಾಗೂ ಪೂಜಿಸುವ ಸಂಪ್ರದಾಯವನ್ನು ಅನಾದಿಕಾಲದಿಂದಲೂ ಪಾಲಿಸಿಕೊಂಡು ಬರುತ್ತಿದ್ದಾರೆ. ಶ್ರೀಕೃಷ್ಣನು ವಿಶೇಷವಾಗಿ ಬಡವರಿಗೂ ನೇರವಾಗಿ ಆಶೀರ್ವದಿಸುವ ದೇವರು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಥ್ ಹೇಳಿದರು.  

ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕಂಪ್ಲಿ ತಾಲೂಕು ಯಾದವ (ಗೊಲ್ಲರ) ಸಂಘದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಶ್ರೀಕೃಷ್ಣ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನ ಭಾವಚಿತ್ರಕ್ಕೆ ವಿಶೇಷ ಪೂಜೆ ಹಾಗೂ ಪುಷ್ಪಾರ್ಚನೆ ನೆರವೇರಿಸಿದ ಬಳಿಕ ಅವರು ಮಾತನಾಡಿದರು.  

ಪ್ರತಿ ವರ್ಷ ಶ್ರಾವಣ ಮಾಸದ ಅಷ್ಟಮಿ ದಿನದಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಮಹಾವಿಷ್ಣುವಿನ ದಶಾವತಾರಗಳಲ್ಲಿ ಶ್ರೀಕೃಷ್ಣನು ಎಂಟನೇ ಅವತಾರವಾಗಿದ್ದು, ಧರ್ಮ ಸಂರಕ್ಷಣೆಗಾಗಿ ಮಹತ್ವದ ಕಾರ್ಯ ನಿರ್ವಹಿಸಿದ್ದಾನೆ ಎಂದು ತಿಳಿಸಿದರು.  

ಶ್ರೀಕೃಷ್ಣನು ಜಗತ್ತಿಗೆ ಅತ್ಯಂತ ಪವಿತ್ರವಾದ ಭಗವದ್ಗೀತೆಯನ್ನು ನೀಡಿದ್ದು, ಅದರ ಸಂದೇಶಗಳು ಇಂದಿಗೂ ಮಾನವ ಜೀವನಕ್ಕೆ ದಾರೀದೀಪವಾಗಿವೆ. ಹೀಗಾಗಿ ಶ್ರೀಕೃಷ್ಣ ಎಲ್ಲರಿಗೂ ಆರಾಧ್ಯ ದೈವವಾಗಿದ್ದಾನೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಯಾದವ (ಗೊಲ್ಲರ) ಸಂಘದ ಅಧ್ಯಕ್ಷ ವೆಂಕಟೇಶರಾವ್, ಮುಖಂಡರಾದ ಬಿ. ಶಂಕರ​‍್ಪ, ಸಂಜೀವರಾಯುಡು, ವೆಂಕಟೇಶ್, ಭೂಮೇಶ್ವರ, ಜಡೆ ಮಹಾದೇವಪ್ಪ, ಬಳ್ಳಾರಿ ಮಾಧವ, ರಮೇಶ್, ದೊಡ್ಡಬಸಪ್ಪ, ನಾಗರಾಜ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.