ಶಾಲಾ ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಹೊರಹಾಕಲು ಕ್ರೀಡಾಕೂಟಗಳು ಅವಶ್ಯಕ: ಶಾಸಕ ವಿಶ್ವಾಸ ವೈದ್ಯ

ಶಾಲಾ ಮಕ್ಕಳಲ್ಲಿ ಅಡಗಿರುವ ಕ್ರೀಡಾ ಪ್ರತಿಭೆ ಹೊರಹಾಕಲು ಕ್ರೀಡಾಕೂಟಗಳು ಅವಶ್ಯಕ: ಶಾಸಕ ವಿಶ್ವಾಸ ವೈದ್ಯ Sports meets are essential to bring out the hidden sporting talent among school children: MLA Vishwa


ಸವದತ್ತಿ 18:   ಶಾಲಾ ಮಕ್ಕಳಲ್ಲಿ ಅಡಗಿರುವ ಗುಪ್ತ ಕ್ರೀಡಾ ಪ್ರತಿಭೆಯನ್ನು ಹೊರಹಾಕಲು ಇಲಾಖಾ ಕ್ರೀಡಾಕೂಟಗಳು ಅತ್ಯಂತ ಅವಶ್ಯಕ ಎಂದು ಸ್ಥಳೀಯ ಶಾಸಕ ವಿಶ್ವಾಸ ವೈದ್ಯ ಅಭಿಪ್ರಾಯಪಟ್ಟರು.ನಗರದ ತಾಲೂಕಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾ ಪಂಚಾಯತ್ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ, ತಾಲೂಕಾ ಮಟ್ಟದ 14 ಮತ್ತು 17 ವಯೋಮಿತಿಯೊಳಗಿನ ಶಾಲಾ ಮಕ್ಕಳ ಕ್ರೀಡಾಕೂಟದ ಕ್ರೀಡಾಜ್ಯೋತಿಯನ್ನು ಸ್ವೀಕರಿಸಿ ಅವರು ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದ ಜೊತೆಗೆ ಕ್ರೀಡೆಯಲ್ಲೂ ಸಕ್ರಿಯವಾಗಿ ತೊಡಗಿಕೊಳ್ಳಬೇಕು. ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ, ಕ್ರೀಡಾಸ್ಫೂರ್ತಿ ಅತ್ಯಂತ ಮುಖ್ಯ" ಎಂದು ಕಿವಿಮಾತು ಹೇಳಿದರು. ಸೋಲು-ಗೆಲುವುಗಳೆರಡನ್ನೂ ಸಮಾನವಾಗಿ ಸ್ವೀಕರಿಸುವ ಗುಣವನ್ನು ಕ್ರೀಡೆಯು ಕಲಿಸಿಕೊಡುತ್ತದೆ. ಸೋತಾಗ ಕುಗ್ಗದೆ, ಗೆದ್ದಾಗ ಅಹಂ ಪಡದೆ ಮುಂದೆ ಸಾಗುವ ಗುಣವೇ ನಿಜವಾದ ಕ್ರೀಡಾಪಟುವಿನ ಲಕ್ಷಣ ಎಂದು ತಿಳಿಸಿದರು. ಇಂದಿನ ಯುವ ಜನತೆ ದೈಹಿಕ ಹಾಗೂ ಮಾನಸಿಕ ದೃಢತೆಗಾಗಿ ಕ್ರೀಡೆಗಳಲ್ಲಿ ಉತ್ಸಾಹದಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು.

ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ ಮಾತನಾಡಿ ಕ್ರೀಡೆಯು ವಿದ್ಯಾರ್ಥಿಗಳಲ್ಲಿ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಬೆಳೆಸುತ್ತದೆ ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮ ಮತ್ತು ನೈತಿಕ ಮೌಲ್ಯಗಳು ಅತ್ಯಾವಶ್ಯಕ. ಮಕ್ಕಳು ತಮ್ಮ ಸಾಧನೆಯ ಮೂಲಕ ಹೆತ್ತವರಿಗೆ ಹೆಮ್ಮೆ ತರುವಂತಾಗಬೇಕು ಎಂದರು.ಈ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ ಬಿಇಒ ಎ.ಎ.ಖಾಜಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಕೇವಲ ಅಂಕಗಳಿಕೆಯ ಶಿಕ್ಷಣ ಮಾತ್ರವಲ್ಲದೆ, ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.

ವಿದ್ಯಾರ್ಥಿಗಳು ಕ್ರೀಡಾಸ್ಪೂರ್ತಿಯನ್ನು ಮೈಗೂಡಿಸಿಕೊಂಡು ಉತ್ಸಾಹದಿಂದ ಭಾಗವಹಿಸಬೇಕು ಎಂದು ಕರೆ ನೀಡಿದರು. ಈ ವೇಳೆ  ತಾಪಂ ಇಒ ಆನಂದ ಬಡಕುಂದ್ರಿ, ನಗರಸಭೆ ಪೌರಾಯುಕ್ತ ಸಂಗನಬಸಯ್ಯ ಗದಗಿಮಠ,ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಜಂಬ್ರಿ,ಮಾರುತಿ ಬಸಲಿಗುಂದಿ, ಗ್ಯಾರಂಟಿ ಸಮಿತಿಯ ಅಧ್ಯಕ್ಷ ಶಿವಕುಮಾರ್ ರಾಠೋಡ್, ಶ್ರೀಕಾಂತ್ ಯರಡ್ಡಿ, ಶಿವಾನಂದ ಪಟ್ಟಣಶೆಟ್ಟಿ, ಹಾಗೂಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು, ವಿವಿಧ ಶಾಲೆಯ ಮುಖ್ಯ ಶಿಕ್ಷಕರು, ದೈಹಿಕ ಶಿಕ್ಷಕರು ಹಾಗೂ ತಾಲೂಕಿನ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.