ಮತದಾರರ ವಿಶೇಷ ಪರಿಷ್ಕರಣೆ: ಜಾಗೃತಿ ಜಾಥಾಗೆ ಚಾಲನೆ

ಮತದಾರರ ವಿಶೇಷ ಪರಿಷ್ಕರಣೆ: ಜಾಗೃತಿ ಜಾಥಾಗೆ ಚಾಲನೆ Special Voter Revision: Awareness Rally Flagged Off

೨೦೨೬ರ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಅರಿವು ಕಾರ್ಯಕ್ರಮ 

ಹೊಸಪೇಟೆ ೩: ೨೦೨೬ರ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಮತದಾರರ ಜಾಗೃತಿ ಜಾಥಾಗೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. 

ನಗರದ ವಡಕರಾಯನ ದೇವಸ್ಥಾನದಿಂದ ಆರಂಭವಾದ ಜಾಥಾ ಪಂಚಮುಖ ಆಂಜನೇಯ ದೇವಸ್ಥಾನ, ದೊಡ್ಡ ಮಸೀದಿ, ಗಾಂಧಿ ಚೌಕ್, ಪುಣ್ಯಮೂರ್ತಿ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಸಂಚರಿಸಿ ಪುನೀತ್ ರಾಜ್ಕುಮಾರ್ ವೃತ್ತದಲ್ಲಿ ಸಮಾಪ್ತಿಯಾಯಿತು. 

ಜಾಥಾ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ, ತಿದ್ದುಪಡಿ, ವಿಳಾಸ ಬದಲಾವಣೆ ಹಾಗೂ ಮತದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. 

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಉಪವಿಭಾಗಾಧಿಕಾರಿ ಪಿ. ವಿವೇಕಾನಂದ, ತಹಶೀಲ್ದಾರ್ ಶೃತಿ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್, ನಗರಸಭೆ ಪೌರಾಯುಕ್ತ ಎರಗುಡಿ ಶಿವಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.