ಬೆಳಗಾವಿ

ಕಾಟಗಳಿಯಲ್ಲಿ ನೂತನ ಕನ್ನಡ ಶಾಲೆಗೆ ಜಾಗೆ ಪರೀಶೀಲನೆ

ಕಾಟಗಳಿಯಲ್ಲಿ ನೂತನ ಕನ್ನಡ ಶಾಲೆಗೆ ಜಾಗೆ ಪರೀಶೀಲನೆ


ಖಾನಾಪುರ  21: ತಾಲೂಕಿನ ಕಾಟಗಳಿ ಗ್ರಾಮದಲ್ಲಿ 1ರಿಂದ 8ನೇ ತರಗತಿವರೆಗೆ ನೂತನ ಕನ್ನಡ ಮಾಧ್ಯಮ ಶಾಲೆ ಆರಂಭಿಸುವ ಉದ್ದೇಶದಿಂದ ಆಗಸ್ಟ್‌ 21ರಂದು ಕಿತ್ತೂರು ಕರ್ನಾಟಕ ಸೇನೆ ಯುವ ಘಟಕದ ರಾಜ್ಯಾಧ್ಯಕ್ಷ ಮಹೇಶ್ ಶೀಗಿಹಳ್ಳಿ ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಆಪ್ತ ಕಾರ್ಯದರ್ಶಿಯೊಂದಿಗೆ ಗ್ರಾಮದ ಸರ್ಕಾರಿ ಜಾಗೆಯನ್ನು ಪರೀಶೀಲಿಸಿದರು.  

ಕಾಟಗಳಿ ಸೇರಿದಂತೆ ಸುತ್ತಮುತ್ತಲಿನ ನಾಲ್ಕೈದು ಗ್ರಾಮಗಳ ಕನ್ನಡ ಮಾಧ್ಯಮದ ಮಕ್ಕಳಿಗೆ ಅನುಕೂಲವಾಗುವಂತೆ ನೂತನ ಕನ್ನಡ ಶಾಲೆ ಹಾಗೂ ಕನ್ನಡ ಅಂಗನವಾಡಿ ಆರಂಭಿಸುವಂತೆ ಈ ಹಿಂದೆ ಶಿಕ್ಷಣ ಸಚಿವ ಮಧು ಬಂಗಾರ​‍್ಪ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಮನವಿಗೆ ಸ್ಪಂದಿಸಿದ್ದ ಸಚಿವರ ಆಪ್ತ ಕಾರ್ಯದರ್ಶಿಗಳು, ಬೆಳಗಾವಿ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಪರೀಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.  

2026-27ನೇ ಸಾಲಿನಲ್ಲಿ ಹೊಸ ಶಾಲೆ ಆರಂಭಿಸುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರೂ, ಸದ್ಯ ಕಾಟಗಳಿಯಲ್ಲಿರುವ ಮರಾಠಿ ಶಾಲೆಯಲ್ಲೇ ವಿಭಾಗ ಮಾಡಿ 1ರಿಂದ 3ನೇ ತರಗತಿಯ ಕನ್ನಡ ಮಕ್ಕಳಿಗೆ ಶಿಕ್ಷಣ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದು ತಾತ್ಕಾಲಿಕ ವ್ಯವಸ್ಥೆಯಾಗಿದ್ದು, ಇದನ್ನೇ ಮುಂದುವರಿಸಿ ನೂತನ ಕನ್ನಡ ಶಾಲೆ ನಿರ್ಮಾಣ ವಿಳಂಬ ಮಾಡಬಾರದು ಎಂದು ಮಹೇಶ್ ಶೀಗಿಹಳ್ಳಿ ಒತ್ತಾಯಿಸಿದರು.  

ಬೆಳಗಾವಿ ಗಡಿಭಾಗದಲ್ಲಿ ಕನ್ನಡ ಮಾಧ್ಯಮದ ಮಕ್ಕಳಿಗೆ ಶಿಕ್ಷಣದ ಅವಕಾಶಗಳು ಕಡಿಮೆಯಾಗುತ್ತಿರುವುದು ಆತಂಕಕಾರಿ. ಕಾಟಗಳಿ ಗ್ರಾಮದ ಐದು ಎಕರೆ ಸರ್ಕಾರಿ ಜಾಗೆಯನ್ನು ಕನ್ನಡ ಶಾಲೆಗೆ ಮೀಸಲಿಟ್ಟು, 1ರಿಂದ 8ನೇ ತರಗತಿವರೆಗೆ ಸುಸಜ್ಜಿತ ನೂತನ ಕನ್ನಡ ಶಾಲೆ ನಿರ್ಮಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಮತ್ತೊಮ್ಮೆ ಮನವಿ ಮಾಡಿದರು.  

ಈ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ದಿಗಂಬರ ನಾಯಕ, ಲಕ್ಷ್ಮಣ ಬಾಗಡಿ, ಗ್ರಾಮದ ಮುಖಂಡರಾದ ಬಸ್ಸು ಗೂಡಾದ್ಯಗೋಳ, ಭೀಮರಾವ ನಾಯಕ್, ಲಗಮಣ್ಣ ಬಸಪ್ಪ ನಾಯಕ, ರಾಜು ನಿಂಗಪ್ಪ ನಾಯಕ, ಕಾಶೀನಾಥ ನಾಯ್ಕ, ನಾಗಪ್ಪ ನಾಯಕ, ಪರಸು ಸಂಜೀಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 


ಸುದ್ದಿ ಓದಿ