ಸಿಂದಗಿ: ಬೆಳೆ ಸಮೀಕ್ಷೆಗೆ ರೈತರು ಸಂಪೂರ್ಣ ಮಾಹಿತಿ ನೀಡಲು ತಹಶೀಲ್ದಾರ್ ಕರೆ
Sindagi: Tahsildar urges farmers to provide complete information for crop survey
ಲೋಕದರ್ಶನ ವರದಿ
ಸಿಂದಗಿ, ಆ.23: ತಾಲೂಕಿನಲ್ಲಿ ಬೆಳೆ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ರೈತರು ತಮ್ಮ ಜಮೀನಿನ ದಾಖಲೆಗಳು ಹಾಗೂ ಬೆಳೆದಿರುವ ಬೆಳೆಗಳ ಕುರಿತು ಅಗತ್ಯ ಮಾಹಿತಿಯನ್ನು ಸಿದ್ಧವಾಗಿಟ್ಟುಕೊಂಡು ಸಮೀಕ್ಷಾ ಸಿಬ್ಬಂದಿ ಜಮೀನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ನೀಡಬೇಕು ಎಂದು ತಹಶೀಲ್ದಾರ್ ಕರೇಪ್ಪ ಬೆಳ್ಳಿ ಹೇಳಿದರು.
ನಗರದ ತಾಲೂಕು ಆಡಳಿತ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು 17,552 ರೈತರು ಬೆಳೆ ವಿಮೆ ಪಾವತಿಸಿದ್ದಾರೆ. ಬೆಳೆ ವಿಮೆ ಕ್ಲೇಮ್ ಪಡೆಯುವಲ್ಲಿ ಬೆಳೆ ಸಮೀಕ್ಷೆ ಅತ್ಯಂತ ಪ್ರಮುಖವಾಗಿದ್ದು, ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಸಂಪೂರ್ಣ ಹಾಗೂ ನಿಖರ ಮಾಹಿತಿಯನ್ನು ಸಮೀಕ್ಷಾ ಸಿಬ್ಬಂದಿಗೆ ನೀಡಬೇಕು ಎಂದು ತಿಳಿಸಿದರು.
ರೈತರು ತಮ್ಮ ಜಮೀನಿನ ವಿಸ್ತೀರ್ಣ, ಸರ್ವೆ ನಂಬರ್ ಹಾಗೂ ವಿವಿಧ ಹಿಸ್ಸಾಗಳಲ್ಲಿ ಬೆಳೆದಿರುವ ಬೆಳೆಗಳ ಕುರಿತು ಸಮೀಕ್ಷಾ ಸಿಬ್ಬಂದಿಗೆ ಮಾಹಿತಿ ನೀಡಬೇಕು. ಒಂದೇ ಜಮೀನಿನಲ್ಲಿ ಒಂದಕ್ಕಿಂತ ಹೆಚ್ಚು ಬೆಳೆಗಳನ್ನು ಬೆಳೆದಿದ್ದರೆ, ಪ್ರತಿಯೊಂದು ಬೆಳೆಯ ಮಾಹಿತಿಯನ್ನೂ ಪ್ರತ್ಯೇಕವಾಗಿ ದಾಖಲಿಸಬೇಕು. ಕೇವಲ ಒಂದು ಬೆಳೆಯ ಮಾಹಿತಿಯನ್ನು ನೀಡಿದರೆ, ದಾಖಲಾಗಿರುವ ಬೆಳೆಗೆ ಮಾತ್ರ ವಿಮಾ ಪರಿಹಾರ ದೊರೆಯುವ ಸಾಧ್ಯತೆ ಇದೆ. ಆದ್ದರಿಂದ ಜಮೀನಿನಲ್ಲಿ ವಾಸ್ತವವಾಗಿ ಬೆಳೆದಿರುವ ಎಲ್ಲ ಬೆಳೆಗಳ ಮಾಹಿತಿಯನ್ನು ತಪ್ಪಿಲ್ಲದೆ ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರಶಾಂತ ಸಾಣಿ ಮಾತನಾಡಿ, ಬೆಳೆ ಸಮೀಕ್ಷೆ ನಡೆಸುವ ಸಿಬ್ಬಂದಿ ರೈತರಿಂದ ಯಾವುದೇ ರೀತಿಯ ಹಣ ಪಡೆಯಬಾರದು. ಸಮೀಕ್ಷೆ ಕಾರ್ಯದಲ್ಲಿ ನೇಮಕಗೊಂಡ ಸಿಬ್ಬಂದಿ ಅಕ್ರಮ ಅಥವಾ ಕರ್ತವ್ಯಲೋಪ ಎಸಗಿರುವುದು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಅದೇ ರೀತಿ ವಿಮಾ ಕಂಪನಿಯ ಹೆಸರಿನಲ್ಲಿ ಯಾರಾದರೂ ರೈತರಿಗೆ ಆಮಿಷವೊಡ್ಡಿ ಹಣ ಪಡೆದು ವಂಚನೆಗೆ ಮುಂದಾದರೆ, ತಕ್ಷಣ ಕೃಷಿ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಇಂತಹ ವಂಚನೆ ಪ್ರಕರಣಗಳು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 