ಶಂಕರ ನಂದೇಶ್ವರರಿಗೆ ಸಹಕಾರಿ ಸಂಘಗಳಿಂದ ಸತ್ಕಾರ

ಶಂಕರ ನಂದೇಶ್ವರರಿಗೆ ಸಹಕಾರಿ ಸಂಘಗಳಿಂದ ಸತ್ಕಾರ  Shankara Nandeshwara felicitated by cooperative societies

 ಅಥಣಿ  17:  ಡಿಸಿಸಿ ಬ್ಯಾಂಕ್‌ನ ಅಥಣಿ ತಾಲೂಕು ನಿಯಂತ್ರಣಾಧಿಕಾರಿಯಾಗಿ ಶಂಕರ ನಂದೇಶ್ವರ ಅವರು ಬೆಳಗಾವಿಯಿಂದ ವರ್ಗಾವಣೆಯಾಗಿ ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ಉತ್ತರ ವಲಯದ 14 ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿ ಅವರನ್ನು ಗೌರವಿಸಿ ಸತ್ಕರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಹಾಗೂ ಶ್ರೀ ಕಾಡಸಿದ್ಧೇಶ್ವರ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಘೂಳಪ್ಪ ಜತ್ತಿ, ಶಾಸಕ ಲಕ್ಷ್ಮಣ ಸವದಿ ಅವರು ಸಹಕಾರ ಸಚಿವರಾಗಿದ್ದರಿಂದ ರಾಜ್ಯದ ಸಹಕಾರ ಇಲಾಖೆಗೆ ಮತ್ತಷ್ಟು ಬಲ ಬಂದಿದೆ ಎಂದು ಹೇಳಿದರು.  

ಶಂಕರ ನಂದೇಶ್ವರ ಅವರು ಈ ಹಿಂದೆ ಸುಮಾರು ಎರಡು ದಶಕಗಳ ಕಾಲ ಅಥಣಿ ಡಿಸಿಸಿ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸಿದ್ದರು. ಬಳಿಕ ಬೆಳಗಾವಿಗೆ ವರ್ಗಾವಣೆಯಾಗಿದ್ದು, ಇದೀಗ ಮತ್ತೆ ಅಥಣಿಗೆ ನಿಯಂತ್ರಣಾಧಿಕಾರಿಯಾಗಿ ವರ್ಗಾವಣೆಯಾಗಿರುವುದು ಸಹಕಾರಿ ಸಂಘಗಳ ನಿರ್ದೇಶಕರು ಹಾಗೂ ಕಾರ್ಯದರ್ಶಿಗಳಲ್ಲಿ ಸಂತಸ ಮೂಡಿಸಿದೆ ಎಂದರು.  

ಗುಂಡೇವಾಡಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಶಿವಾನಂದ ಗೊಲಭಾವಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಅವರ ಅಳಿಯ ಶಂಕರ ನಂದೇಶ್ವರ ಅವರು ಅಥಣಿ ಡಿಸಿಸಿ ಬ್ಯಾಂಕ್‌ನ ನಿಯಂತ್ರಣಾಧಿಕಾರಿಯಾಗಿ ಬಂದಿರುವುದು ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.  

ಗುಂಡೇವಾಡಿ, ಪಾರ್ಥನಹಳ್ಳಿ, ಕಿರಣಗಿ, ತಾಂವಶಿ, ಬಳ್ಳಿಗೇರಿ, ಚಮಕೇರಿ, ಅನಂತಪುರ, ಖಿಳೇಗಾಂವ, ಮಲಾಬಾದ ಹಾಗೂ ಆಜೂರ ಸೇರಿದಂತೆ ವಿವಿಧ ಗ್ರಾಮಗಳ ಸಹಕಾರಿ ಸಂಘಗಳ ಆಡಳಿತ ಮಂಡಳಿ ಸದಸ್ಯರು, ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಶಂಕರ ನಂದೇಶ್ವರ ಅವರನ್ನು ಸತ್ಕರಿಸಿದರು.  

ಸಹಕಾರಿ ಧುರೀಣರಾದ ಶಿವಾನಂದ ಕುಳ್ಳೊಳ್ಳಿ, ವಿಮಲಾ ಸಂಕ್ರಟ್ಟಿ, ಓಂಪ್ರಕಾಶ ಡೊಳ್ಳಿ, ಸಿದರಾಯ ತೇಲಿ, ಸುನೀಲ ಪಾಟೀಲ, ರುದ್ರಗೌಡ ಪಾಟೀಲ, ಸಂಜೀವ ಉಮರೆ, ಬಾಹುಸಾಹೇಬ ಪತ್ತಾರ, ಸಿದಗೌಡ ಪಾಟೀಲ, ರಮೇಶ ಗುರವ, ಮಲ್ಲಿಕಾರ್ಜುನ ದಳವಾಯಿ, ಬಸಪ್ಪ ಮಸರಗುಪ್ಪಿ, ಕುಮಾರಗೌಡ ಪಾಟೀಲ, ವಿಶ್ವನಾಥ ಪಾಟೀಲ, ಅಬಾಸಾಹೇಬ ಚವ್ಹಾಣ, ಮಹಾಂತಯ್ಯ ಹಿರೇಮಠ, ಆನಂದ ಕದಂ, ಬನಪ್ಪ ನಂದಗಾಂವ, ವಿಜುಗೌಡ ಪಾಟೀಲ ಹಾಗೂ ಬಸವರಾಜ ನಾವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.