ಧಾರವಾಡ - ಹುಬ್ಬಳ್ಳಿ

ದೇಶ ಸೇವೆಯೇ ಯುವಕರ ಪ್ರಮುಖ ಗುರಿಯಾಗಲಿ : ಸ್ನೇಹಲ್ ಆರ್

ದೇಶ ಸೇವೆಯೇ ಯುವಕರ ಪ್ರಮುಖ ಗುರಿಯಾಗಲಿ : ಸ್ನೇಹಲ್ ಆರ್

ಲೋಕದರ್ಶನ ವರದಿ 

ಧಾರವಾಡ 14 : ದೇಶ ಸೇವೆಯನ್ನು ತಮ್ಮ ಪ್ರಮುಖ ಗುರಿಯನ್ನಾಗಿಸಿಕೊಂಡು, ಭಾರತೀಯ ಸೇನೆ, ಪೊಲೀಸ್ ಇಲಾಖೆ ಹಾಗೂ ವಿವಿಧ ಸಶಸ್ತ್ರ ಪಡೆಗಳಿಗೆ ಸೇರಲು ಯುವಕರು ಸದಾ ಉತ್ಸುಕರಾಗಿರಬೇಕು ಎಂದು ಜಿಲ್ಲಾಧಿಕಾರಿ ಸ್ನೇಹಲ್ ಆರ್‌. ವಿದ್ಯಾರ್ಥಿಗಳಿಗೆ ಕರೆ ನೀಡಿದರು.  ಕರ್ನಾಟಕ ಎಜುಕೇಶನ್ ಬೋರ್ಡ್‌ ಹಾಗೂ ಮಾಳಮಡ್ಡಿ ಸಂಕೀರ್ಣದ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಭಾರತದ ರಕ್ಷಣಾ ವ್ಯವಸ್ಥೆ ಮತ್ತು ಸಶಸ್ತ್ರ ಪಡೆಗಳ ವಸ್ತು ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಪ್ರದರ್ಶನವು ವಿದ್ಯಾರ್ಥಿಗಳಿಗೆ ಸಶಸ್ತ್ರ ಪಡೆಗಳ ಕಾರ್ಯವೈಖರಿ ಕುರಿತು ಸ್ಪಷ್ಟ ಅರಿವು ಮೂಡಿಸುವುದರ ಜೊತೆಗೆ, ಕೇಂದ್ರ ಸರ್ಕಾರದ ಅಗ್ನಿವೀರ್ ಯೋಜನೆಯ ಬಗ್ಗೆ ಮಾಹಿತಿ ಪಡೆಯಲು ಸಹಕಾರಿಯಾಗಿದೆ ಎಂದರು. ದೇಶದ ಪ್ರಗತಿ, ಭದ್ರತೆ ಮತ್ತು ರಕ್ಷಣೆಗೆ ಯುವಕರು ತಮ್ಮದೇ ಆದ ಕೊಡುಗೆ ನೀಡಬೇಕು. ವಿದ್ಯಾರ್ಥಿಗಳು ಸಣ್ಣ ಕನಸುಗಳಿಗೆ ಸೀಮಿತವಾಗದೆ, ದೊಡ್ಡ ಗುರಿಗಳನ್ನು ಹೊಂದಿ ಅವುಗಳನ್ನು ಸಾಕಾರಗೊಳಿಸಲು ನಿರಂತರ ಪರಿಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.  

ಬ್ರಿಗೇಡಿಯರ್ ಎಸ್‌.ಜಿ. ಭಾಗವತ್ ಮಾತನಾಡಿ, ಭಾರತವು ರಕ್ಷಣಾ ಸಾಮಗ್ರಿಗಳಿಗಾಗಿ ಇತರ ದೇಶಗಳ ಮೇಲೆ ಅವಲಂಬಿತವಾಗಿದ್ದ ಕಾಲದಿಂದ ಇಂದು ಕ್ಷಿಪಣಿಗಳನ್ನು ರಫ್ತು ಮಾಡುವ ಹಂತಕ್ಕೆ ಬೆಳೆದಿದೆ. ಯುವಜನರಲ್ಲಿ ಶಿಸ್ತು ಹೆಚ್ಚಬೇಕು ಹಾಗೂ ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮ ಕೊಡುಗೆ ನೀಡಬೇಕು ಎಂದರು. ಕೆಇ ಬೋರ್ಡ್‌ ಅಧ್ಯಕ್ಷ ಮಹಾದೇವ ನಾ. ಜೋಶಿ ಅಧ್ಯಕ್ಷತೆ ವಹಿಸಿದ್ದರು.ಸುಮಾರು 350 ವಿದ್ಯಾರ್ಥಿಗಳು ನೌಕಾಪಡೆ, ವಾಯುಪಡೆ, ಭೂಸೇನೆ, ವಿವಿಧ ರೆಜಿಮೆಂಟ್ಗಳು ಹಾಗೂ ಬಿಎಸ್‌ಎಫ್ಗೆ ಸಂಬಂಧಿಸಿದ ಮಾದರಿಗಳನ್ನು ಪ್ರದರ್ಶಿಸಿದರು. ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಪಾಲಕರು ಹಾಗೂ ಸಾರ್ವಜನಿಕರು ಪ್ರದರ್ಶನ ವೀಕ್ಷಿಸಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ಶ್ರೀಕಾಂತ ಪಾಟೀಲ ಸ್ವಾಗತಿಸಿದರು. ಕಾರ್ಯದರ್ಶಿ ಡಿ.ಎಸ್‌. ರಾಜಪುರೋಹಿತ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಚಾರ್ಯೆ ಡಾ. ಸುನೀತಾ ಕಡಪಟ್ಟಿ ವಂದಿಸಿದರು. ಎಸ್‌.ಎಲ್‌. ಶೇಖರಗೋಳ ನಿರೂಪಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಅಶೋಕ ನಾಗಸಮುದ್ರ, 24 ಕರ್ನಾಟಕ ಬೆಟಾಲಿಯನ್ ಎಡಿಎಮ್ ವೈ.ಎಸ್‌. ರಾಣಾವತ್ ಮತ್ತಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ