ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ: ಪಡಿತರ ವಿತರಣೆಗೆ ತೊಂದರೆ

ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್ ಸಮಸ್ಯೆ: ಪಡಿತರ ವಿತರಣೆಗೆ ತೊಂದರೆ  Server issues at fair price shops: Disruption in ration distribution

ಲೋಕದರ್ಶನ ವರದಿ  

ಗದಗ, ಆ. 26: ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಕಳೆದ ಹಲವು ದಿನಗಳಿಂದ ಸರ್ವರ್ ಸಮಸ್ಯೆ ಮುಂದುವರಿದಿದ್ದು, ಬಡ ಹಾಗೂ ಮಧ್ಯಮ ವರ್ಗದ ಪಡಿತರ ಫಲಾನುಭವಿಗಳಿಗೆ ತೀವ್ರ ತೊಂದರೆಯಾಗುತ್ತಿದೆ.  

ಪಡಿತರ ಚೀಟಿ ಫಲಾನುಭವಿಗಳು ಅಕ್ಕಿ ಸೇರಿದಂತೆ ಪಡಿತರ ಪಡೆಯಲು ಸುಮಾರು 30ರಿಂದ 40 ನಿಮಿಷಗಳವರೆಗೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆಲವೊಮ್ಮೆ ಸರ್ವರ್ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸಿದರೆ, ಮತ್ತೊಮ್ಮೆ ಸಂಪೂರ್ಣ ಸ್ಥಗಿತಗೊಳ್ಳುತ್ತಿರುವುದರಿಂದ ಬೆಳಗ್ಗೆಯಿಂದ ಸಂಜೆಯವರೆಗೆ ನ್ಯಾಯಬೆಲೆ ಅಂಗಡಿಗಳ ಮುಂದೆ ಜನರು ಸರದಿಯಲ್ಲಿ ಕಾಯಬೇಕಾಗಿದೆ.  

ದಿನಗೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಬಡವರು ಒಂದು ದಿನ ಕೆಲಸಕ್ಕೆ ತೆರಳದೆ ಪಡಿತರಕ್ಕಾಗಿ ಕಾಯಬೇಕಾಗಿದ್ದು, ಇದರಿಂದ ಕುಟುಂಬದ ದಿನನಿತ್ಯದ ಆದಾಯಕ್ಕೂ ನಷ್ಟವಾಗುತ್ತಿದೆ. ವೃದ್ಧರು, ಮಹಿಳೆಯರು, ಅಂಗವಿಕಲರು ಹಾಗೂ ದೂರದ ಪ್ರದೇಶಗಳಿಂದ ಬರುವ ಬಡ ಜನರು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.  

ಸರ್ವರ್ ಸಮಸ್ಯೆಯಿಂದ ಪ್ರತಿದಿನ ಪಡಿತರ ಪಡೆಯಲು ಬರುವ ಫಲಾನುಭವಿಗಳು ಹಾಗೂ ನ್ಯಾಯಬೆಲೆ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿ, ಗೊಂದಲ ಮತ್ತು ಜಗಳದ ವಾತಾವರಣವೂ ನಿರ್ಮಾಣವಾಗುತ್ತಿದೆ. ಆದರೆ, ಈ ಸಮಸ್ಯೆಗೆ ನ್ಯಾಯಬೆಲೆ ಅಂಗಡಿ ಮಾಲೀಕರೇ ಸಂಪೂರ್ಣ ಕಾರಣ ಎಂದು ಹೇಳುವುದು ಸರಿಯಲ್ಲ. ಸರ್ವರ್, ತಾಂತ್ರಿಕ ವ್ಯವಸ್ಥೆ ಹಾಗೂ ಇಲಾಖೆಯ ಆಡಳಿತಾತ್ಮಕ ಸಮಸ್ಯೆಗಳಿಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಗಮನಹರಿಸಿ ಪರಿಹಾರ ಒದಗಿಸಬೇಕಾಗಿದೆ.