ಕೆಎಲ್‌ಇ ಆಯುರ್ವೇದ ಮಹಾವಿದ್ಯಾಲಯದ ವತಿಯಿಂದ ಇಂದ್ರಿಯ ಆರೋಗ್ಯ ಸಪ್ತಾಹ ಆಚರಣೆ
ಲೋಕದರ್ಶನ ವರದಿ
ಚಿಕ್ಕೋಡಿ 2: ಕಣ್ಣು, ಕಿವಿ, ಮೂಗು, ನಾಲಿಗೆ ಹಾಗೂ ತ್ವಚೆಯ ಆರೋಗ್ಯ ಕಾಪಾಡುವ ಕುರಿತು ಆಯುರ್ವೇದದ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವ ಉದ್ದೇಶದಿಂದ ‘ಆಯುಗ್ರಾಮ 3.0 ಹಿ ಇಂದ್ರಿಯ ಆರೋಗ್ಯ ಸಪ್ತಾಹ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಪ್ರಾಂಶುಪಾಲ ಡಾ. ಕಿರಣಕುಮಾರ ಮುತ್ನಾಳಿ ಹೇಳಿದರು.
ಆಗಸ್ಟ್ 1ರಂದು ಕೆಎಲ್‌ಇ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆ, ಚಿಕ್ಕೋಡಿ ವತಿಯಿಂದ ಚಿಂಚಣಿ ಅಲ್ಲಮಪ್ರಭು ಮಠದಲ್ಲಿ ಆಯೋಜಿಸಿದ್ದ ಆಯುಗ್ರಾಮ 3.0 ಹಿ ಇಂದ್ರಿಯ ಆರೋಗ್ಯ ಸಪ್ತಾಹದ ಎರಡನೇ ಸುತ್ತಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದ್ರಿಯ ಆರೋಗ್ಯ ಜಾಗೃತಿ, ಮನೆ-ಮನೆ ಸಮೀಕ್ಷೆ, ಆರೋಗ್ಯ ತಪಾಸಣೆ, ಆರೋಗ್ಯ ಶಿಕ್ಷಣ, ಯೋಗ, ಜೀವನಶೈಲಿ ಮಾರ್ಗದರ್ಶನ ಸೇರಿದಂತೆ ವಿವಿಧ ಆರೋಗ್ಯ ಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು. ಗ್ರಾಮಸ್ಥರು ಈ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆಯುರ್ವೇದದ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವಂತೆ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಚಿಂಚಣಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಎಸ್.ಎಲ್. ಪಾಟೀಲ, ಆಡಳಿತಾಧಿಕಾರಿ ಮಹಾಂತೇಶ ಗುಡ್ಡನವರ, ಉಪನ್ಯಾಸಕರಾದ ಡಾ. ಬಿ.ಬಿ. ದೇಶಾಯಿ, ಡಾ. ರವಿ ಮಡಿವಾಳರ, ಡಾ. ಶ್ರೀಧರ ಲಕ್ಕುಂಡಿ, ಡಾ. ಸೂರಜ್ ಕುಂಬಾರ, ಡಾ. ಕಾಂಚನಾ ಶರಗಾರ, ಸುದರ್ಶನ ಭಟ್, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.