ಮನೆಯಿಂದಲೇ ಮತದಾನಕ್ಕೆ ಹಿರಿ ಹಿರಿಹಿಗ್ಗಿದ ಹಿರಿಯ ನಾಗರಿಕರು, ವಿಶೇಷ ಚೇತನರು

ವಿಜಯಪುರ ,ಏ.27: ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗವು 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡಲು ನೀಡಿರುವ ವಿಶೇಷ ಸೌಲಭ್ಯ ಬಳಸಿಕೊಂಡು ಜಿಲ್ಲೆಯ ಹಿರಿಯ ನಾಗರೀಕರು ಮತ್ತು ವಿಶೇಷ ಚೇತನರು ತಮ್ಮ ಹಕ್ಕು ಚಲಾಯಿಸಿ ಹಿರಿ ಹಿರಿ ಹಿಗ್ಗಿದರು. 

ಜಿಲ್ಲೆಯ ಲೋಕಸಭಾ ವ್ಯಾಪ್ತಿಯಲ್ಲಿ ಏಪ್ರಿಲ್ 27 ರಂದು ಮನೆಯಿಂದ ಮತದಾನ ಮಾಡಲು ಒಪ್ಪಿಗೆ ಪತ್ರ ನೀಡಿರುವ 85 ವರ್ಷ ಮೇಲ್ಪಟ್ಟ ಹಾಗೂ ವಿಕಲಚೇತನ ಮತದಾರರ ಮನೆಗಳಿಗೆ ವೇಳಾಪಟ್ಟಿ ಮತ್ತು ರೂಟ್ ಮ್ಯಾಪ್ ಸಿದ್ದಪಡಿಸಿಕೊಂಡಿರುವ ಮತಗಟ್ಟೆ ಸಿಬ್ಬಂದಿ ತೆರಳಿ ಮತದಾನ ಪ್ರಕ್ರಿಯೆಗಳನ್ನು ನಡೆಸಿದರು. 

ಮುದ್ದೇಬಿಹಾಳ ಮತಕ್ಷೇತ್ರ ವ್ಯಾಪ್ತಿಯ ಕುಂಟೋಜಿ ಗ್ರಾಮದ 77 ವರ್ಷದ ವಿಶೇಷ ಚೇತನರಾದ ಮಹಾದೇವಿ ಹಿರೇಮಠ ಅವರು,  ಅಧಿಕಾರಿಗಳು ತಿಳಿಸಿದ ಮಾದರಿಯಲ್ಲಿಯೇ ಮತಪತ್ರವನ್ನು ಬಿಡಿಸಿ, ಮತ ಹಾಕಿ, ಸಂಬಂಧಪಟ್ಟ ಲಕೋಟೆಯಲ್ಲಿಯೇ ಮತಪತ್ರವನ್ನು ಹಾಕಿದರು. ನಂತರ ಮಾತನಾಡಿದ ಅವರು,  ಕಾಲು ಮುರಿದ ಕಾರಣ ನಡೆಯಲು ಸಾಧ್ಯವಿಲ್ಲವಾಗಿದ್ದು ಮನೆ ಬಳಿಗೆ ನನ್ನ ಬಂದು ನನ್ನ ಮತ ಪಡೆದದ್ದು ‘ಬಾಳಾ ಛಲೋ ಆತ್ರಿ’ ಎಂದು, ಹೆಮ್ಮೆಯಿಂದ ಮತದಾನ ಮಾಡಿದ ತಮ್ಮ ಬೆರಳ ಗುರುತನ್ನು ತೋರಿಸಿ ಸಂಭ್ರಮಿಸಿದರು. 

ಬಬಲೇಶ್ವರ ತಾಲೂಕಿನ ದದಾಮಟ್ಟಿಯ ಗ್ರಾಮದ 90 ವರ್ಷದ ವಯೋವೃದ್ಧೆ ಯಲ್ಲವ್ವ ಮಾದರ, ತನಗೆ ಅನಾರೋಗ್ಯವಿದ್ದರೂ ಕುಶಿಯಿಂದ ಮತದಾನ ಮಾಡಿ,  ಮನೆಯಿಂದ ಮತದಾನ ಮಾಡಿದ್ದು ಛಲೋ ಆತ್ರಿ.. ಮೊದಲು ನಮ್ಮನ್ನು ವೋಟ್ ಮಾಟೋಕೆ ಎಳಕೊಂಡು ಹೋಗ್ತಾ ಇದ್ರು, ಇವಾಗ ಕುಳಿತಲ್ಲಿಯೇ ಅಧಿಕಾರಿಗಳು ಬಂದು ಮತ ಹಾಕಿಸಿಕೊಳ್ಳಲು ಪವರ್ ಕೊಟ್ಟಿದ್ದು ಕುಶಿ ಆಗಿದೆ ಎಂದು, ತಮ್ಮ ಬೆರಳಿನ ಶಾಹಿಯನ್ನು ತೋರಿಸಿ ನಕ್ಕರು.  

ಮನೆಯಿಂದ ಮತದಾನ ಮಾಡುವ ಅರ್ಹ ಮತದಾರರಿಗೆ, ಮುಂಚಿತವಾಗಿಯೇ ಸೇರಿದಂತೆ ಮತಗಟ್ಟೆ ಅಧಿಕಾರಿಗಳು ಇಂದು ಅವರ ಮನೆಗಳಿಗೆ ಭೇಟಿ ನೀಡುವ ಸಮಯ ಮತ್ತು ದಿನಾಂಕವನ್ನು ಬಿಎಲ್‌ಒಗಳ ಮುಖಾಂತರ ತಿಳಿಸಿದ್ದು, ತಾವು ಬರುವ ಸಮಯದಲ್ಲಿ ಮತದಾನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳುವಂತೆ ತಿಳಿಸಿದ್ದರಿಂದ ಯಾವುದೇ ಗೊಂದಲಗಳಿಗೆ ಆಸ್ಪದವಾಗದೇ ಮತದಾನ ಪ್ರಕ್ರಿಯೆ ನಡೆಯಿತು. 

ಮನೆಯಿಂದ ಮತದಾನ ಮಾಡುವ ಮತಗಟ್ಟೆ ಸಿಬ್ಬಂದಿಗಳ ತಂಡದಲ್ಲಿ ಸೆಕ್ಟರ್ ಅಧಿಕಾರಿ, ಪೋಲಿಂಗ್ ಅಧಿಕಾರಿಗಳು , ಮೈಕ್ರೋ ಆಬ್ಸರ್ವರ್, ಬಿ.ಎಲ್‌.ಒ, ಪೊಲೀಸ್ ಸಿಬ್ಬಂದಿ, ವಿಡಿಯೋಗ್ರಾಫರ್ ಗಳಿದ್ದು, ತಮಗೆ ನಿಯೋಜಿಸಿದ್ದ ಪ್ರತ್ಯೇಕ ವಾಹನದಲ್ಲಿಯೇ, ಮತದಾನ ಪ್ರಕ್ರಿಯೆಗೆ ಅಗತ್ಯವಿದ್ದ ಎಲ್ಲಾ ಪರಿಕರಗಳೊಂದಿಗೆ ನಿಯೋಜಿತ ಮನೆಗಳಿಗೆ ಭೇಟಿ ನೀಡಿದರು. 

ಮನೆಯಿಂದ ಮತದಾನ ಮಾಡುವ ಕಾರ್ಯವಿಧಾನದ ಬಗ್ಗೆ ಮತದಾರ ಕುಟುಂಬದವರಿಗೆ ವಿವರಿಸಿ, ಮತದಾರನ ಮೇಲೆ ಯಾರೊಬ್ಬರೂ ಪ್ರಭಾವ ಬೀರದಂತೆ, ಮತದಾನ ಮಾಡುವ ಸಂದರ್ಭದಲ್ಲಿ ಕುಟುಂಬ ಸದಸ್ಯರನ್ನು ಮತದಾನ ಮಾಡುವ ಕೊಠಡಿಯಿಂದ ಹೊರೆಗೆ ನಿಲ್ಲಿಸಿ, ಗೋಪ್ಯತೆ ಕಾಪಾಡುವ ಮೂಲಕ ಮತದಾನ ಪ್ರಕ್ರಿಯೆ ನಡೆಸಲಾಯಿತು. 

ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆಗಿರುವ ಟಿ.ಭೂಬಾಲನ್ ಅವರು ಏ.27ರಿಂದ 29ರವರೆಗೆ ಮೂರು ದಿನಗಳ ಕಾಲ ನಡೆಯುವ 85 ವರ್ಷ ಮೇಲ್ಪಟ್ಟವರು ಮತ್ತು ವಿಕಲಚೇತನರಿಗೆ ಮನೆಯಿಂದಲೇ ಮತದಾನ ಮಾಡುವ ಪ್ರಕ್ರಿಯೆಯನ್ನು ವಿಕ್ಷೀಸಲು ನಾಗಠಾಣ ವಿಧಾನಸಭಾ ಮತಕ್ಷೇತ್ರದ ಹೊನ್ನಟಗಿ ಗ್ರಾಮಕ್ಕೆ ತೆರಳಿ ಕಾರ್ಯವೈಖರಿಯನ್ನು ಪರೀಶೀಲಿಸಿದರು.