ಯಶಸ್ಸಿಗೆ ಆತ್ಮವಿಶ್ವಾಸ, ನಿರಂತರ ಪ್ರಯತ್ನ ಅಗತ್ಯ: ಡಾ. ಕೆ.ಪಿ. ಲತಾ

ಯಶಸ್ಸಿಗೆ ಆತ್ಮವಿಶ್ವಾಸ, ನಿರಂತರ ಪ್ರಯತ್ನ ಅಗತ್ಯ: ಡಾ. ಕೆ.ಪಿ. ಲತಾ Self-confidence and continuous effort are essential for success: Dr. K.P. Latha

ಲೋಕದರ್ಶನ ವರದಿ 

ಬಾಗಲಕೋಟೆ 03: ಜೀವನ ಎಂದರೆ ಕೇವಲ ತಲುಪಬೇಕಾದ ಗಮ್ಯಸ್ಥಾನವಲ್ಲ; ಅದು ಒಂದು ಸುಂದರ ಪಯಣ. ಆ ಪಯಣದಲ್ಲಿ ಸಿಗುವ ಪ್ರತಿಯೊಂದು ಸಣ್ಣ ಸಂತೋಷವನ್ನೂ ಆಸ್ವಾದಿಸಬೇಕು ಎಂದು ಬಾಗಲಕೋಟ ವಿವಿಯ ನೋಂದಣಾಧಿಕಾರಿ ಡಾ. ಕೆ.ಪಿ. ಲತಾ ಹೇಳಿದರು. 

ನಗರದ ಬಿವಿವಿ ಸಂಘದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ "ಅಭ್ಯುದಯ" ಜಿಮ್ಖಾನಾ ಚಟುವಟಿಕೆಗಳ ಉದ್ಘಾಟನೆ ಹಾಗೂ ಬಿ.ಎಸ್‌.ಸಿ ಮತ್ತು ಬಿಸಿಎ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

ಜೀವನದಲ್ಲಿ ಸಾಧನೆ ಮಾಡಲು ನಿರಂತರ ಪ್ರಯತ್ನ ಅತ್ಯಗತ್ಯ. ಸಣ್ಣ-ಸಣ್ಣ ಯಶಸ್ಸುಗಳನ್ನು ಸಂಭ್ರಮಿಸುವ ಮನೋಭಾವ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಎಂತಹ ಕಷ್ಟದ ಪರಿಸ್ಥಿತಿ ಎದುರಾದರೂ ಅದನ್ನು ಜಯಿಸುವ ಶಕ್ತಿ ನನ್ನಲ್ಲಿದೆ ಎಂಬ ಧನಾತ್ಮಕ ಚಿಂತನೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿರಬೇಕು ಎಂದರು. 

ನನಗೆ ಈ ವಿಷಯ ಓದಲು ಸಾಧ್ಯವಿಲ್ಲ ಎಂದುಕೊಳ್ಳುವ ಬದಲು, ನಾನು ಪ್ರಯತ್ನಿಸಿದರೆ ಖಂಡಿತ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ನಮ್ಮ ಜೀವನವನ್ನು ನಾವು ಸ್ವತಃ ರೂಪಿಸಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. 

ಅಧ್ಯಕ್ಷತೆ ವಹಿಸಿದ ಬಿವಿವಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಪದನಿಮಿತ್ಯ ಕಾರ್ಯದರ್ಶಿ ಡಾ. ಎಸ್‌.ಎಂ. ಗಾಂವ್ಕರ್ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಸ್ಪಷ್ಟ ಗುರಿ ಮತ್ತು ಅದನ್ನು ಸಾಧಿಸುವ ದೃಢ ಸಂಕಲ್ಪ ಇರಬೇಕು. ನಾವು ಏನು ಮಾಡುತ್ತಿದ್ದೇವೆ ಎಂಬ ಸ್ಪಷ್ಟತೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ಹೇಳಿದರು. 

ಮಹಾವಿದ್ಯಾಲಯದ ಪ್ರಾಚಾರ್ಯ ಎಸ್‌.ಆರ್‌. ದೇಶಪಾಂಡೆ, ಪಿಯುಸಿ ಪ್ರಾಚಾರ್ಯ ಡಾ. ಎನ್‌.ಎಚ್‌. ಬೇವಿನಹಳ್ಳಿ, ಐಕ್ಯೂಎಸಿ ಸಂಯೋಜಕ ಡಾ. ಡಿ.ಎಸ್‌. ಲಮಾಣಿ, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಡಾ. ಎಂ.ಬಿ. ಮಠ, ದೈಹಿಕ ಶಿಕ್ಷಣ ನಿರ್ದೇಶಕ ಸಿದ್ದರಾಮ್ ಮಂಕಣಿ, ಅಕ್ಷಯ್ ಗಲಗಲಿಮಠ ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳಾದ ಕೀರ್ತಿ ಪೂಜಾರಿ ಮತ್ತು ಮಲ್ಲಿಕಾರ್ಜುನ ಹುನ್ನೂರ ಉಪಸ್ಥಿತರಿದ್ದರು.