ಮನಸ್ಸಿನ ನಿಗ್ರಹದಿಂದ ಮಾದಕ ವ್ಯಸನಗಳಿಂದ ಮುಕ್ತಿ: ಕವಯತ್ರಿ ಅಂಜಲಿ ಬೆಳಗಲ್

ಮನಸ್ಸಿನ ನಿಗ್ರಹದಿಂದ ಮಾದಕ ವ್ಯಸನಗಳಿಂದ ಮುಕ್ತಿ: ಕವಯತ್ರಿ ಅಂಜಲಿ ಬೆಳಗಲ್ Self-Control of the Mind Can Help Overcome Drug Addiction: Poet Anjali Belagal

ಹೊಸಪೇಟೆ: ಮನುಷ್ಯನ ದುಶ್ಚಟಗಳಿಗೆ ಆತನ ಮನಸ್ಸೇ ಕಾರಣವಾಗಿದ್ದು, ಮಾದಕ ವ್ಯಸನ ಹಾಗೂ ದುಶ್ಚಟಗಳಿಂದ ದೂರವಾಗಲು ಆಂತರಿಕ ಮನಸ್ಸನ್ನು ನಿಗ್ರಹಿಸಿಕೊಳ್ಳಬೇಕು ಎಂದು ಖ್ಯಾತ ಕವಯತ್ರಿ ಅಂಜಲಿ ಬೆಳಗಲ್ ಹೇಳಿದರು.

ವಿಜಯನಗರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕರ್ನಾಟಕ ಸರ್ಕಾರದ ಸುಧಾರಣಾ ಸೇವೆಗಳ ಇಲಾಖೆ, ವಿಜಯನಗರ ಜಿಲ್ಲಾ ಕೇಂದ್ರ ಕಾರಾಗೃಹ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಹೊಸಪೇಟೆ ಇವರ ಸಹಯೋಗದಲ್ಲಿ ಬಂಧಿಗಳಿಗಾಗಿ ಆಯೋಜಿಸಿದ್ದ ಮನಃಪರಿವರ್ತನೆ ಹಾಗೂ ‘ನಶಾ ಮುಕ್ತ ಭಾರತ’ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಅತಿಯಾದ ಆಸೆ, ಆಕಾಂಕ್ಷೆ ಹಾಗೂ ಐಷಾರಾಮಿ ಜೀವನದ ಬಯಕೆ ಮನುಷ್ಯನನ್ನು ಡ್ರಗ್ಸ್, ಕಾಮ, ಕ್ರೋಧ, ಮದ ಮತ್ತು ಮತ್ಸರದಂತಹ ದುಶ್ಚಟಗಳತ್ತ ಕೊಂಡೊಯ್ಯುತ್ತದೆ. ಅಕ್ರಮ ಸಂಬಂಧಗಳು ಸೇರಿದಂತೆ ಹಲವು ಕಾರಣಗಳಿಂದ ಮನುಷ್ಯ ಅನೇಕ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿರುವುದು ವಿಷಾದನೀಯ. ಮಕ್ಕಳ ಮೇಲಿನ ಅತ್ಯಾಚಾರ ಹಾಗೂ ಕೊಲೆಗಳಂತಹ ಕೃತ್ಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮನುಷ್ಯನ ಮನಸ್ಸನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಅಗತ್ಯವಿದೆ. ಭಾರತವನ್ನು ನಶಾಮುಕ್ತ ರಾಷ್ಟ್ರವನ್ನಾಗಿಸಲು ಮೊದಲು ಪ್ರತಿಯೊಬ್ಬರೂ ತಮ್ಮ ಆಂತರಿಕ ಮನಸ್ಸನ್ನು ನಿಯಂತ್ರಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕನವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವುದೇ ದುಶ್ಚಟಗಳಿಗೆ ಬಲಿಯಾಗಿ ಜೀವನವನ್ನು ಹಾಳು ಮಾಡಿಕೊಳ್ಳಬಾರದು. ಮಾದಕ ವ್ಯಸನದಿಂದ ದೂರವಿದ್ದು, ತಮ್ಮ ಬದುಕು, ಸ್ವಾತಂತ್ರ್ಯ ಹಾಗೂ ಸುಂದರ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಯಾವುದೋ ತಪ್ಪಿನಿಂದ ಬಂಧಿಗಳಾಗಿದ್ದರೂ, ಭಗವಂತ ನೀಡಿರುವ ಅಮೂಲ್ಯ ಬದುಕನ್ನು ಮಾದಕ ದುಶ್ಚಟಗಳಿಂದ ಹಾಳು ಮಾಡಿಕೊಳ್ಳಬಾರದು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕೇಂದ್ರ ಕಾರಾಗೃಹದ ಅಧೀಕ್ಷಕ ಎಫ್.ಜಿ. ಬಾರಿಕರ್ ಮಾತನಾಡಿ, ವಿಜಯನಗರ ಜಿಲ್ಲಾ ಕಾರಾಗೃಹಕ್ಕೆ ಹೊಸದಾಗಿ ಬಂದಿರುವ ಬಂಧಿಗಳು ಮಾದಕ ದ್ರವ್ಯಗಳ ವ್ಯಸನಕ್ಕೆ ಸಿಲುಕಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ನಿಮ್ಮ ಆರೋಗ್ಯ ಹದಗೆಟ್ಟರೆ ನಿಮ್ಮ ಕುಟುಂಬದ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಯೋಚಿಸಬೇಕು ಎಂದರು.

ಕಾರಾಗೃಹವು ಗುರುಕುಲದಂತಿದ್ದು, ವಿವಿಧ ಕಾರಣಗಳಿಂದ ಆರೋಪಿಗಳಾಗಿ ಇಲ್ಲಿಗೆ ಬಂದಿರುವವರು ಜೀವನದ ಅಮೂಲ್ಯ ಮಾನವೀಯ ಮೌಲ್ಯಗಳನ್ನು ಕಲಿಯಬೇಕು. ಮಾನಸಿಕವಾಗಿ ಕುಗ್ಗದೆ, ತಮ್ಮ ಜೀವನದ ಮೌಲ್ಯಗಳನ್ನು ಅರಿತುಕೊಂಡು ಉತ್ತಮ ಬದುಕಿನತ್ತ ಹೆಜ್ಜೆ ಇಡಬೇಕು. ಭಾರತವನ್ನು ನಶಾಮುಕ್ತ ಭಾರತವನ್ನಾಗಿಸಲು ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಅವರು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಜೈಲರ್ ಲಚ್ಚಣ್ಣ, ಮಂಜುನಾಥ್ ಹಾಗೂ ಕಾರಾಗೃಹ ಸಿಬ್ಬಂದಿ ಉಪಸ್ಥಿತರಿದ್ದರು.