ಉತ್ತರ ಕರ್ನಾಟಕಕ್ಕೆ ಮತ್ತೊಂದು ಬರೆ ಎಳೆಯುತ್ತಿರುವ ದೇವೇಗಾಡ

ಹೋರಾಟದ ಎಚ್ಚರಿಕೆ ನೀಡಿದ ಎಸ್‌.ಆರ್‌.ಪಾಟೀಲ 

ಬಾಗಲಕೋಟೆ 24: ಪದೇ ಪದೇ ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಉತ್ತರ ಕರ್ನಾಟಕಕ್ಕೆ ಮಾಜಿ ಪ್ರಧಾನಿ ದೇವೇಗೌಡ ಮತ್ತೊಂದು ಬರೆ ಎಳೆಯುವ ಮೂಲಕ ಅನ್ಯಾಯವೆಸಗಿದ್ದಾರೆ ಎಂದು ಮಾಜಿ ಸಚಿವ ಹಾಗೂ  ಮಾಜಿ ವಿರೋಧ ಪಕ್ಷದ ನಾಯಕ ಎಸ್‌.ಆರ್‌.ಪಾಟೀಲ್ ಹೇಳಿದರು. 

ಅವರು ನವ ನಗರದ ಪತ್ರಿಕಾ ಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ರಾಜ್ಯಕ್ಕೆ ನೆಲ ಜಲ ಭಾಷೆಗೆ ಅನ್ಯಾಯವಾಗುತ್ತಿರುವಾಗ ಒಮ್ಮತದ ಹೋರಾಟ ಅನಿವಾರ್ಯ ಎಂದು ಹೇಳುವ ದಕ್ಷಿಣ ಕನ್ನಡ ಭಾಗದ ಜನಪ್ರತಿನಿಧಿಗಳು ಹಾಗೂ ಸರಕಾರಗಳು ನಿರಂತರವಾಗಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಪಂಚ ಪಂಚನದಿಗಳ ಬೀಡೆನಿಸಿಕೊಂಡಿರುವ ವಿಜಯಪುರ ಹಾಗೂ ಬಾಗಲಕೋಟ್ ಜಿಲ್ಲೆಗಳು ಸದಾ ಬರನಾಡು ಎಂಬ ಹಣೆಪಟ್ಟು ಹೊಂದಿರುತ್ತವೆ ಎಂದರು. 

ಕೇವಲ ಎರಡು ಮೂರು ಜಿಲ್ಲೆಗಳಿಗೆ ಸೀಮಿತವಾಗಿರುವ ಕಾವೇರಿ ನದಿಗಾಗಿ ಉಗ್ರ ಹೋರಾಟ ನಡೆಸುವುದನ್ನು ನಾವು ಗಮನಿಸಿದ್ದೇವೆ. ಆ ಪ್ರತಿಭಟನೆಯಲ್ಲಿ ಚಿತ್ರರಂಗ ಕಲಾವಿದರು, ಕವಿಗಳು ಮಾಜಿ ಹಾಗೂ ಹಾಲಿ ರಾಜಕಾರಣಿಗಳು ಗುತ್ತಿಗೆದಾರರು ಮಹಿಳೆಯರು ಅನೇಕ ಸಂಘ ಸಂಸ್ಥೆಗಳು ಪಾಲ್ಗೊಂಡು ದೊಡ್ಡ ಸುದ್ದಿಯನ್ನಾಗಿ ಮಾಡುತ್ತಾರೆ. ಆದರೆ ಅದೇ ಕೃಷ್ಣೆಯ ಬಗ್ಗೆ ವಿಷಯ ಬಂದಾಗ ಯಾರೂ ಇತ್ತ ಗಮನ ಹರಿಸದೆ ಇರುವುದು ವಿಪರ್ಯಾಸ ಎಂದರು. 

ನಮ್ಮ ಭಾಗದ ಜನಪ್ರತಿನಿಧಿಗಳು ಈ ಪಕ್ಷ ಭೇದ ಮರೆತು ಕೃಷ್ಣೆಯ ಉಳಿವಿಗಾಗಿ ಹೋರಾಟ ಮಾಡುವದು ಅನಿವಾರ್ಯವಾಗಿದ್ದು, ಸುಮ್ಮನೆ ಕುಳಿತರೆ ನಮ್ಮೆಲ್ಲರ ಹೆಣಗಳ ಮೇಲೆ ಕೃಷ್ಣೆಯ ನೀರನ್ನು ಹರಿಸಿಕೊಂಡು ದಕ್ಷಿಣ ಕರ್ನಾಟಕಕ್ಕೆ ಬಳಸಿಕೊಳ್ಳುವ ಹುನ್ನಾರು ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಕಳೆದ 11 ವರ್ಷಗಳಿಂದ ನ್ಯಾಯಮೂರ್ತಿ ಬ್ರಿಜ್ಜೇಶ್ ಕುಮಾರ್ ಅವರ ವರದಿ ಪರಿಷ್ಕರಣೆಗೆ ಸುಮ್ಮನೆ ಕೇಂದ್ರ ಸರ್ಕಾರ ಕಾಲ ಕಳೆಯುತ್ತಿದ್ದು, ಇದುವರೆಗೆ ಡಿ ನೋಟಿಪಿಕೇಷನ್ ಮಾಡಿಲ್ಲ. ಈಗ ಸರಕಾರ ಈ ವಿಷಯ ಸುಪ್ರೀಂ ಕೋರ್ಟಿನಲ್ಲಿರುವುದರಿಂದ ಮಾಡಲಾಗುವುದಿಲ್ಲ ಎಂಬ ಕಳ್ಳ ಮಾತನ್ನು ಹೇಳುತ್ತಿದ್ದು, ಆದರೆ ಅದೇ ವಿಷಯ ಕಾವೇರಿಗೆ ಬಂದಾಗ ಕೂಡಲೆ ಡಿ ನೋಟಿಫಿಕೇಶನ್ ಮಾಡುತ್ತಿದ್ದಾರೆ. ಇದರಿಂದ ಮಲತಾಯಿ ಧೋರಣೆ ಕಂಡು ಬರುತ್ತದೆ ಎಂದರು.  

ಮೇಲಿಂದ ಮೇಲೆ ದಿವ್ಯ ನಿರ್ಲಕ್ಷಕ್ಕೆ ಒಳಗಾಗುತ್ತಿರುವ ಉತ್ತರ ಕರ್ನಾಟಕದ ಜೀವನದಿಯಾಗಿರುವ ಕೃಷ್ಣೆಯನ್ನು ಸಮರ​‍್ಕವಾಗಿ ಬಳಸಿಕೊಂಡರೆ ಈ ಭಾಗದ 13 ಜಿಲ್ಲೆಗಳು ಸಮೃದ್ದ ನೀರಾವರಿ ಆಗುವದರ ಜೊತೆಗೆ 15 ಲಕ್ಷ ಎಕರೆ ಜಮೀನು ನೀರಾವರಿ ಆಗಿ ಇಲ್ಲಿಯ ಜನ ಗುಳೆ ಹೋಗುವುದಿಲ್ಲ. ಬದಲಾಗಿ ನಮ್ಮ ಭಾಗಕ್ಕೆ ದುಡಿಯಲು ಹೊರಗಿನಿಂದಲೇ ಜನ ಬರುವ ಕಾಲ ಬರುತ್ತದೆ ಎಂದರು. 

 ಉತ್ತರ ಕರ್ನಾಟಕ ಭಾಗ ಸುಖ ಸಮೃದ್ಧಿ ಹೊಂದಲು ಅದಕ್ಕೆ ಕೃಷಿ ಚಟುವಟಿಕೆಗಳು ಅವಶ್ಯವಾಗಿದ್ದು ಕೃಷ್ಣಾ ಮೇಲ್ದಂಡೆ ಯೋಜನೆ 524 ರ ಬದಲಾಗಿ 522 ಅನ್ನು ಮಾಡಿಕೊಂಡು ಅದರಿಂದ ಆಗುವ ಸಾಧಕ ಬಾದಕಗಳನ್ನು ಪರಿಹರಿಸಿಕೊಂಡು ಕಾರ್ಯಪ್ರವೃತ್ತರಾದರೆ 13 ಜಿಲ್ಲೆಗಳಿಗೆ ಕೃಷ್ಣೆಯ ನೀರನ್ನು ಬಳಸಿಕೊಳ್ಳಬಹುದಾಗಿದೆ ಎಂದರು. ಅವಶ್ಯವಾಗಿರುವ ಕೃಷ್ಣೆಯ ನೀರನ್ನು ಅವಲಂಬಿತವಾದ ವಿಜಯಪುರ ಯಾದಗಿರಿ, ಬಾಗಲಕೋಟ, ಗದಗ್, ರಾಯಚೂರ್, ಕೊಪ್ಪಳ, ಗುಲ್ಬರ್ಗ ಮುಂತಾದ ಜಿಲ್ಲೆಗಳು ಸಮೃದ್ಧವಾಗಿ ನೀರಾವರಿಯಾಗಲು ಸಾಧ್ಯವಾಗಿದೆ ಎಂದರು.  

ಕೇಂದ್ರ ಸರ್ಕಾರ ಈ ವಿಷಯ ಕುರಿತು ಡಿ ನೋಟಿಪಿಕೇಷನ್ ಹಿಂದೆಟು ಹಾಕುತ್ತಿರುವುದು ಗಮನಿಸಿದಾಗ ಇತ್ತಿಚೆಗೆ ಕೋಲಾರದಲ್ಲಿ ನಡದ ಪ್ರಧಾನ ಮೋದಿ ಅವರ ಕಾರ್ಯಕ್ರಮದಲ್ಲಿ ದೇವೇಗೌಡರ ಮಾತಿನಂತೆ 10 ಜಿಲ್ಲೆಗಳಿಗೂ ಕುಡಿಯುವ ನೀರಿನ ಬಳಕೆಗೆ ಕೃಷ್ಣೆಯ ನೀರನ್ನು ಬಳಸಿಕೊಳ್ಳುವ ಚಿಂತನೆಯಲ್ಲಿ ಇವೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತದೆ. ಇದರಿಂದ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಕಲಾವಿದರು ಹಿತಚಿಂತಕರು ಕವಿಗಳು ಜನಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡು ಕೃಷ್ಣೆಯ ಉಳಿವಿಗಾಗಿ ಹೋರಾಟ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.