ನಗರದ ವಿವಿಧ ಭಾಗಗಳಿಗೆ ಚುನಾವಣಾಧಿಕಾರಿ ದಿವ್ಯ ಪ್ರಭು ಭೇಟಿ

ಧಾರವಾಡ 29: ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಹೆಚ್ಚಳಕ್ಕೆ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಜಿಲ್ಲಾಡಳಿತ ಮತ್ತು ಜಿಲ್ಲಾ ಸ್ವಿಪ್ ಸಮಿತಿಯು ವಿವಿಧ ಕಾರ್ಯಗಳ ಮೂಲಕ ನಿರಂತರವಾಗಿ ಪ್ರಯತ್ನಿಸುತ್ತಿದೆ. 

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿಯ ಬಹುತೇಕ ಅಧಿಕಾರಿ, ಸಿಬ್ಬಂದಿಗಳು ಕಳೆದ ಹಲವು ತಿಂಗಳಿಂದ ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಚುನಾವಣಾ ಸಿದ್ದತೆಯಲ್ಲಿ ತೊಡಗಿದ್ದಾರೆ. 

ಮತಗಟ್ಟೆ ಮಟ್ಟದ ಅಧಿಕಾರಿಗಳು ತಮ್ಮ ಮತಗಟ್ಟೆ ವ್ಯಾಪ್ತಿಯ ಮತದಾರರ ಮನೆಮನೆಗೆ ಹೋಗಿ ಮತದಾರ ವಿವರ ಇರುವ ವೊಟರ್ ಸ್ಲಿಪ್ ವಿತರಿಸುವ ಕಾರ್ಯ ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. 

ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಇಂದು ಬೆಳಿಗ್ಗೆ ಧಾರವಾಡ ನಗರದ ಗೊಲ್ಲರ ಕಾಲೋನಿ, ಮೇದಾರ ಓಣಿ ಮುಂತಾದ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ, ಮತದಾರರಿಗೆ ವೊಟರ್ ಸ್ಲಿಪ್ ತಲುಪಿರುವ ಬಗ್ಗೆ ಖಚಿತಪಡಿಸಿಕೊಂಡರು.  

ಗೊಲ್ಲರ ಓಣಿ ಮತದಾರರಾದ ವಸರವ್ವ ಜಕಾತಿ, ಯಲ್ಲವ್ವ ಉಣಕಲ್ಲ, ತಿಪ್ಪಣ್ಣ ಗೊಲ್ಲರ, ಶಾಂತವ್ವ ದೊಡವಾಡ ಅವರ ಮನೆಗಳಲ್ಲಿನ ವೊಟರ್ ಸ್ಲಿಪ್ ಪರೀಶೀಲಿಸಿ, ಅವರೊಂದಿಗೆ ಮತದಾರ ಗುರುತಿನ ಪತ್ರ, ವೊಟರ್ ಸ್ಲಿಪ್, ಮತಗಟ್ಟೆಗಳಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಯಾವುದೇ ಭಯ, ಆತಂಕಗಳಿಲ್ಲದೆ ಮುಕ್ತವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ಅವರು ತಿಳಿಸಿದರು. 

ಮತದಾನ ಯಾವಾಗ ಇದೆ ? ಎಂದು ಕೇಳಿದಾಗ ಗೊಲ್ಲರ ಓಣಿಯ 65 ವರ್ಷದ ಅನಕ್ಷರಸ್ಥ ಮಹಿಳೆ, ಯಲ್ಲವ್ವ ಉಣಕಲ್ಲ, ಮೇ 7ನೇ ತಾರೀಖ ಐತರೀ ಮೆಡಮ್ ಅಂದಾಗ, ಜಿಲ್ಲಾಧಿಕಾರಿಗಳು ಖುಷಿಯಿಂದ ಆ ಮಹಿಳೆಯ ಬೆನ್ನುತಟ್ಟಿ, ತಾವೇಲ್ಲರೂ ಅಂದು ಮತಗಟ್ಟೆಗೆ ಬಂದು ಮತದಾನ ಮಾಡಬೇಕು. ಸಂವಿಧಾನ ನೀಡಿರುವ ಮತದಾನದ ಹಕ್ಕನ್ನು ಎಲ್ಲರೂ ತಪ್ಪದೇ ಚಲಾಯಿಸಬೇಕು ಎಂದರು. 

ಜಿಲ್ಲೆಯಲ್ಲಿರುವ 1660 ಮತಗಟ್ಟೆಗಳಲ್ಲಿ ಇರುವ ಪ್ರತಿ ಮತಗಟ್ಟೆ ಮಟ್ಟದ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯ ಪ್ರತಿ ಮನೆಗೆ ಭೇಟಿ ನೀಡಿ, ಪ್ರತಿ ಮತದಾರನಿಗೆ ವೊಟರ್ ಸ್ಲಿಪ್, ಪ್ರತಿ ಕುಟುಂಬಕ್ಕೆ ಮತದಾನ ಮಾಹಿತಿ ಇರುವ ಒಂದು ವೊಟರ್ ಗೈಡ್ ವಿತರಿಸುತ್ತಾರೆ. ಇದು ತಲುಪಿರುವ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಪಡೆದುಕೊಂಡರು. 

ಮೊದಲ ಬಾರಿಗೆ ಮತ ಚಲಾಯಿಸಲಿರುವ 18 ರಿಂದ 19 ವರ್ಷದೊಳಗಿನ ನವಯುವ ಮತದಾರರಿಗೆ ವೊಟರ್ ಸ್ಲಿಪ್‌ದೊಂದಿಗೆ ಜಿಲ್ಲಾ ಚುನಾವಣಾಧಿಕಾರಿಗಳಿಂದ (ಲೇಟರ್ ಹೆಡ್ ಮೇಲೆ) ವಿಶೇಷವಾಗಿ ಶುಭಾಶಯಪತ್ರವನ್ನು ಸಹ ತಲುಪಿಸಲಾಗುತ್ತಿದೆ. ಈ ಕುರಿತು ಪರೀಶೀಲಿಸಿ, ನವ ಮತದಾರರನ್ನು ಮತದಾನಕ್ಕೆ ಬರುವಂತೆ ಪ್ರೇರಣೆ ನೀಡಿದರು. 

ಜಿಲ್ಲೆಯಲ್ಲಿ ಶೇ.50 ಕ್ಕಿಂತ ಹೆಚ್ಚು ವೊಟರ್ ಸ್ಲಿಪ್ ವಿತರಣೆ: ಜಿಲ್ಲೆಯಲ್ಲಿ ಬಿಸಿಲು ಪ್ರಮಾಣ ಹೆಚ್ಚಾಗಿರುವದರಿಂದ ಬಿಎಲ್‌ಓಗಳು ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಮತದಾರರ ಮನೆಗೆ ಭೇಟಿ ನೀಡಿ, ವೊಟರ್ ಸ್ಲಿಪ್ ನೀಡುತ್ತಿದ್ದಾರೆ. ಮನೆಗೆ ಹೋದಾಗ ಲಭ್ಯರಾಗದ ಮತದಾರರಿಗೆ ಪಕ್ಕದ ಮನೆಯಲ್ಲಿ ಮಾಹಿತಿ ನೀಡಿ, ಬರುತ್ತಾರೆ. ಮರು ದಿನ ಮತ್ತೇ ಅವರ ಮನೆಗೆ ತೆರಳಿ, ಮತದಾನದ ಮಾಹಿತಿ, ವೊಟರ್ ಸ್ಲಿಪ್ ವಿತರಿಸುತ್ತಾರೆ. 

ಪರ ಊರು, ಪರಸ್ಥಳಗಳಿಗೆ ತೆರಳಿರುವ ಮತ್ತು ಇತರ ಕಾರಣಗಳಿಂದ ಬಿಎಲ್‌ಓಗಳ ಸಂಪರ್ಕಕ್ಕೆ ಸಿಗದಿರುವ ಮತದಾರರಿಗೆ ಮತದಾನದ ದಿನದಂದು ಮತಗಟ್ಟೆ ವ್ಯಾಪ್ತಿಯ ನೂರು ಮೀಟರ್ ಒಳಗಡೆ ವೊಟರ್ ಹೆಲ್ಪ್‌ಡೆಸ್ಕ ತೆರೆದು, ಮತದಾರರಿಗೆ ವೊಟರ್ ಸ್ಲಿಪ್, ಮತದಾನ ಮಾಡುವ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು. 

*ಮತದಾರ ಪಟ್ಟಿಯಲ್ಲಿ ನಿಮ್ಮ ಮಾಹಿತಿಯನ್ನು ಪರೀಶೀಲಿಸಿ:* ಮತದಾರರು ತಮ್ಮ ಹೆಸರು ಮತದಾರ ಪಟ್ಟಿಯಲ್ಲಿ ಇರುವ ಕುರಿತು ಖುದ್ದು ಪರೀಶೀಲಿಸಬಹುದು. ಮತದಾರ ಸಹಾಯವಾಣಿ 1950 ಗೆ ಕರೆ ಮಾಡಿ, ತಿಳಿಯಬಹುದು. ಹಾಗೂ voters.eci.gov.in ದಲ್ಲಿಯೂ ಪರೀಶೀಲಿಸಬಹುದು. ಮತದಾರ ತನ್ನ ಮತ ಚಲಾಯಿಸಲು ಸಂಬಂದಪಟ್ಟ ಮತಗಟ್ಟೆಯ ಮತದಾರ ಪಟ್ಟಿಯಲ್ಲಿ ಹೆಸರು ಇರುವುದು ಕಡ್ಡಾಯ. ಮತದಾರ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅವಕಾಶ ಸಿಗುವದಿಲ್ಲ ಎಂದು ಅವರು ತಿಳಿಸಿದರು. 

*ಮತದಾನದ ದಿನವು ಬರೀ ರಜೆ ದಿನವಲ್ಲ; ಅದು ಮತದಾನ ಮಾಡುವ ದಿನ:* ನಿಮ್ಮ ಮತ ಚಲಾಯಿಸಲು, ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇರುವುದು ಅವಶ್ಯವಾಗಿದೆ. ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಹುಡುಕಲು ಓಟರ್ ಹೆಲ್ಪ್‌ಲೈನ್ ಆ್ಯಪ್‌ನ್ನು ಬಳಸಿಬಹುದು. ಮತ ಚಲಾಯಿಸಲು ಅನುಕೂಲವಾಗಲು ಮತದಾರರ ದಿನ ರಜೆ ಘೋಷಿಸಲಾಗುವುದು. ಮತಗಟ್ಟೆಯಲ್ಲಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಗೆದುಕೊಂಡು ಹೊಗುವಂತಿಲ್ಲ. ನಿಮ್ಮ ಮತಗಟ್ಟೆಯನ್ನು voters.eci.gov.in ವೆಬ್‌ಸೈಟ್‌ನಲ್ಲಿ ನೋಡಬಹುದು. ಮತದಾರ ಸಹಯವಾಣಿ 1950 ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು.  

*ಮತ ಚಲಾಯಿಸಲು ಯಾವುದಾದರು ಒಂದು ಅನುಮೋದಿತ ಗುರುತಿನ ದಾಖಲೆ, ಗುರುತಿನ ಚೀಟಿಯನ್ನು ಕೊಂಡೆಯ್ಯಿರಿ:* ಮತದಾನ ದಿನದಂದು ನಿಮ್ಮ ಸಂಖ್ಯೆ, ಭಾಗ ಸಂಖ್ಯೆ ತಿಳಿಯಲು ವೊಟರ್ ಸ್ಲಿಪ್ ಇರಲಿ. ಇದು ತಮ್ಮ ಮತದಾರ ಪಟ್ಟಿಯಲ್ಲಿ ಅ.ಸಂ., ಭಾಗ ಸಂಖ್ಯೆ, ಮತಗಟ್ಟೆ ವಿಳಾಸದ ಮಾಹಿತಿ ತಿಳಿಯಲು ಸಹಾಯವಾಗುತ್ತದೆ. ಆದರೆ ಇದನ್ನು ಮತಗಟ್ಟೆಯಲ್ಲಿ ಮತದಾನಕ್ಕೆ ಅಗತ್ಯವಾದ ಗುರುತಿನ ದಾಖಲಾತಿ ಪರಿಗಣಿಸುವದಿಲ್ಲ. ಮತದಾನಕ್ಕೆ ಮತದಾರನ ಗುರುತಿನ ಚೀಟಿ (ಇಕಋ) ಇರಬೇಕು. ಇಲ್ಲದಿದ್ದಲ್ಲಿ ಭಾರತ ಚುನಾವಣಾ ಆಯೋಗವು ಗೆಜೆಟ್ ಮಾಡಿರುವ 12 ದಾಖಲಾತಿಗಳಾದ ಭಾವಚಿತ್ರವಿರುವ ಆಧಾರ್ ಕಾರ್ಡ್‌, ಭಾವಚಿತ್ರವಿರುವ ರಾಷ್ಟ್ರೀಯ ಉದ್ಯೊಗ ಖಾತ್ರಿ ಯೋಜನೆ ಗುರುತಿನ ಚೀಟಿ, ಭಾವಚಿತ್ರವುಳ್ಳ ಬ್ಯಾಂಕ್ ಅಥವಾ ಅಂಚೆ ಕಛೇರಿಯ ಪಾಸ್ ಪುಸ್ತಕ, ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌ (ಕಾರ್ಮಿಕ ಇಲಾಖೆ), ಚಾಲನಾ ಪರವಾನಿಗೆ, ಪ್ಯಾನ್ ಕಾರ್ಡ್‌, ಎನ್‌.ಪಿ.ಆರ್ ಅಡಿಯಲ್ಲಿ ಆರ್‌.ಜಿ.ಐ ವಿತರಿಸಿರುವ ಸ್ಮಾರ್ಟ್‌ ಕಾರ್ಡ್‌, ಭಾರತೀಯ ಪಾಸ್‌ಪೋರ್ಟ್‌, ಭಾವಚಿತ್ರವಿರುವ ಪಿಂಚಣಿ ದಾಖಲೆ, ರಾಜ್ಯ, ಕೇಂದ್ರ, ಕೇಂದ್ರಾಡಳಿತ, ಪಿಎಸ್ ಯು, ಪಬ್ಲಿಕ್ ಲಿಮಿಟೆಡ್ ಕಂಪನಿಗಳು ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸದರು-ಶಾಸಕರು-ವಿಧಾನ ಪರಿಷತ್ ಸದಸ್ಯರಿಗೆ ನೀಡಿರುವ ಅಧಿಕೃತ ಗುರುತಿನ ಚೀಟಿ ಹಾಗೂ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನೀಡಿರುವ ವಿಶೇಷಚೇತನರ ಯುನಿಕ್ ಡಿಸೆಬಲಿಟಿ(ಯುಡಿಐಡಿ) ಗುರುತಿನ ಚೀಟಿ, ಇವುಗಳಲ್ಲಿ ಒಂದನ್ನು ತೋರಿಸಿ ಮತ ಚಲಾಯಿಸಬಹುದು ಎಂದು ಅವರು ಹೇಳಿದರು. 

*ಮತದಾನ ಕೆಂದ್ರಗಳ ಮೂಲಭೂತ ಸೌಲಭ್ಯಗಳು:* ವಿಶೇಷಚೇತನರು ಹಾಗೂ ಹಿರಿಯ ನಾಗರೀಕರಿಗೆ ಇಳಿಜಾರು ಹಾಗೂ ಗಾಲಿ ಕುರ್ಚಿ ನೀಡಲಾಗುತ್ತದೆ. ವಿಶೇಷ ಚೇತನರು ಹಾಗೂ ಹಿರಿಯ ನಾಗರೀಕರಿಗೆ ಆದ್ಯತೆಯ ಪ್ರವೇಶ, ಮೊದಲಿಗೆ ಮಾಹಿತಿ ನೀಡಿರುವ ವಿಶೇಷಚೇತನ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ಮಾಡಲಾಗುವುದು. 

ಮತದಾರರು ತಮ್ಮ ಮಾಹಿತಿಯನ್ನು voters.eci.gov.in ನಲ್ಲಿ ಪರೀಶೀಲಿಸಬಹುದು ಎಂದು ಚುನಾವಣಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದರು.  

ಮತದಾರ ಮನೆ ಭೇಟಿ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಹಾಯಕ ಮತದಾರ ನೋಂದಣಿ ಅಧಿಕಾರಿ ಆಗಿರುವ ತಹಸಿಲ್ದಾರ ಡಾ.ಡಿ.ಎಚ್‌.ಹೂಗಾರ, ಗ್ರಾಮ ಆಡಳಿತ ಅಧಿಕಾರಿ ಕರಿಯಪ್ಪ ಗುಡ್ಡದ, ಮತಗಟ್ಟೆ ಮಟ್ಟದ ಅಧಿಕಾರಿಗಳಾದ ನಿರ್ಮಲಾ ಲಕ್ಕುಂಡಿ, ದ್ರಾಕ್ಷಾಯಣಿ ಹಡಗಲಿ, ಉಮಾ ಮುಳ್ಳಮ್ಮ ಸೇರಿದಂತೆ ಇತರರು ಇದ್ದರು.