ಜೋರಾಗಿ ಶಬ್ದ ಮಾಡುವ ಸಾಧನಗಳ ಬಳಕೆಗೆ ನಿರ್ಬಂಧ

ಜೋರಾಗಿ ಶಬ್ದ ಮಾಡುವ ಸಾಧನಗಳ ಬಳಕೆಗೆ ನಿರ್ಬಂಧ  Restrictions on the use of loud devices

ಲೋಕದರ್ಶನ ವರದಿ 

ಗದಗ, ಸೆ. 8: ಸಾರ್ವಜನಿಕ ಸುವ್ಯವಸ್ಥೆ, ಶಾಂತಿ ಹಾಗೂ ಜನಸಾಮಾನ್ಯರ ನೆಮ್ಮದಿಯ ಹಿತದೃಷ್ಟಿಯಿಂದ ಗದಗ ಜಿಲ್ಲಾದ್ಯಂತ ಡಿಜೆ, ಬೇಸ್ ಬೂಸ್ಟರ್, ಮೊಬೈಲ್ ಡಿಜೆ ವಾಹನಗಳು ಹಾಗೂ 75 ಡೆಸಿಬಲ್ಗಿಂತ ಹೆಚ್ಚಿನ ಶಬ್ದ ಉಂಟುಮಾಡುವ ಧ್ವನಿವರ್ಧಕ ಸಾಧನಗಳ ಬಳಕೆಯನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್ ಆದೇಶ ಹೊರಡಿಸಿದ್ದಾರೆ.  

ಶಬ್ದ ಮಾಲಿನ್ಯ (ನಿಯಂತ್ರಣ ಮತ್ತು ನಿಯಮಗಳು) ನಿಯಮಗಳು-2000 ಹಾಗೂ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಃಓಖಖ)-2023ರ ಕಲಂ 163ರಡಿ ಜಿಲ್ಲಾಧಿಕಾರಿಗಳಿಗೆ ಇರುವ ಅಧಿಕಾರವನ್ನು ಚಲಾಯಿಸಿ ಈ ಆದೇಶ ಜಾರಿಗೊಳಿಸಲಾಗಿದೆ.  

ವಸತಿ ಪ್ರದೇಶಗಳು, ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳ 100 ಮೀಟರ್ ವ್ಯಾಪ್ತಿಯಲ್ಲಿರುವ ಪ್ರದೇಶಗಳು, ಇಳುವರಿ ರಸ್ತೆಗಳು, ಸಂಚಾರ ದಟ್ಟಣೆ ಪ್ರದೇಶಗಳು ಹಾಗೂ ಇತರೆ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಅಲ್ಲದೆ, ಜಿಲ್ಲಾದ್ಯಂತ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಡಿಜೆ ಸೇರಿದಂತೆ ಹೆಚ್ಚಿನ ಶಬ್ದ ಉಂಟುಮಾಡುವ ಸಾಧನಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.