ಬಡವರ ಅಂತ್ಯಕ್ರಿಯೆಗೆ ಅಗ್ಗದ ದರದಲ್ಲಿ ಕಟ್ಟಿಗೆ ಪೂರೈಕೆಗೆ ಮನವಿ
ಮುಂಡಗೋಡ 6: ಮುಂಡಗೋಡ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿನ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಬಡ ವರ್ಗದ ಜನರು ಮೃತಪಟ್ಟಾಗ ಅಂತ್ಯಸಂಸ್ಕಾರಕ್ಕೆ ಅಗತ್ಯವಾದ ಕಟ್ಟಿಗೆ ಖರೀದಿಸಲು ಆರ್ಥಿಕ ತೊಂದರೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಕಡಿಮೆ ದರದಲ್ಲಿ ಕಟ್ಟಿಗೆ ಪೂರೈಕೆ ಮಾಡುವಂತೆ ಡಿಎಸ್‌ಎಸ್ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕೀರ್ಪ ಅವರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿಗಳು, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಉತ್ತರ ಕನ್ನಡ ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಯಲ್ಲಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವ ಅವರು, ಬಡ ಕುಟುಂಬಗಳಿಗೆ ಅರಣ್ಯ ಇಲಾಖೆಯ ಕಟ್ಟಿಗೆ ಮಾರಾಟ ಕೇಂದ್ರಗಳಿಂದ ರಿಯಾಯಿತಿ ದರದಲ್ಲಿ ಕಟ್ಟಿಗೆ ಒದಗಿಸುವಂತೆ ಒತ್ತಾಯಿಸಿದ್ದಾರೆ.
ಪ್ರಸ್ತುತ ಅರಣ್ಯ ಇಲಾಖೆಯ ಡಿಪೋಗಳಲ್ಲಿ ಒಂದು ಕ್ವಿಂಟಲ್ ಕಟ್ಟಿಗೆಗೆ ಸುಮಾರು 800 ರಿಂದ 900 ರೂ. ದರ ನಿಗದಿಯಿದ್ದು, ಒಂದು ಶವ ಸಂಸ್ಕಾರಕ್ಕೆ 5 ರಿಂದ 6 ಕ್ವಿಂಟಲ್ ಕಟ್ಟಿಗೆ ಅಗತ್ಯವಾಗುತ್ತದೆ. ಇದರಿಂದ ಬಡ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಬಡವರು ಅಂತ್ಯಸಂಸ್ಕಾರಕ್ಕಾಗಿ ಹಣ ಹೊಂದಿಸುವವರೆಗೆ ಶವಗಳನ್ನು ಮನೆಯಲ್ಲೇ 24 ರಿಂದ 36 ಗಂಟೆಗಳ ಕಾಲ ಇಡಬೇಕಾದ ಪರಿಸ್ಥಿತಿಗಳು ಎದುರಾಗುತ್ತಿವೆ. ಆದ್ದರಿಂದ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ 100 ರಿಂದ 200 ರೂ. ದರದಲ್ಲಿ ಕಟ್ಟಿಗೆ ಪೂರೈಸಲು ಸರ್ಕಾರ ಸೂಕ್ತ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದ್ದಾರೆ.