ಕಂದಾಯ ಆಡಳಿತ ಹಾಗೂ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ನಿರ್ದೇಶನ

ಕಂದಾಯ ಆಡಳಿತ ಹಾಗೂ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ನಿರ್ದೇಶನ  Regional Commissioner Janaki K.M. issues directives at the review meeting on the progress of revenue

ಗದಗ, ಜು. 30: ಸಾರ್ವಜನಿಕ ಸೇವೆ ಹಾಗೂ ಕಂದಾಯ ಇಲಾಖೆಯ ಬಾಕಿ ಕಡತಗಳ ವಿಲೇವಾರಿಯಲ್ಲಿ ಯಾವುದೇ ವಿಳಂಬ ಸಹಿಸುವುದಿಲ್ಲ. ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರದೆ, ಬಾಕಿ ಪ್ರಕರಣಗಳನ್ನು ನಿಯಮಾನುಸಾರ ತ್ವರಿತವಾಗಿ ಇತ್ಯರ್ಥಪಡಿಸಬೇಕು ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.  

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಕಂದಾಯ ಆಡಳಿತ ಹಾಗೂ ವಿವಿಧ ಇಲಾಖೆಗಳ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಹಾಗೂ ತಿಂಗಳುಗಳಿಂದ ಬಾಕಿ ಉಳಿದಿರುವ ಆಡಳಿತಾತ್ಮಕ ಕಡತಗಳು, ಸಾರ್ವಜನಿಕ ಅರ್ಜಿಗಳು ಮತ್ತು ಕಂದಾಯ ಸಂಬಂಧಿತ ಪ್ರಕರಣಗಳನ್ನು ಶೀಘ್ರ ಪರೀಶೀಲಿಸಿ ವಿಲೇವಾರಿ ಮಾಡುವಂತೆ ಸೂಚಿಸಿದರು.  

ಅರ್ಜಿಗಳ ಪರೀಶೀಲನೆಯಲ್ಲಿ ಅಗತ್ಯ ದಾಖಲೆಗಳನ್ನು ಸಮರ​‍್ಕವಾಗಿ ಪರೀಶೀಲಿಸಬೇಕು. ಆಡಳಿತಾತ್ಮಕ ಅಥವಾ ತಾಂತ್ರಿಕ ಲೋಪಗಳಿದ್ದರೆ ತಕ್ಷಣ ಸರಿಪಡಿಸಬೇಕು. ಮಾಹಿತಿ ಹಕ್ಕು ಕಾಯ್ದೆ ಹಾಗೂ ಮೇಲ್ಮನವಿಗಳಿಗೆ ನಿಗದಿತ ಅವಧಿಯಲ್ಲಿ ಉತ್ತರ ನೀಡಬೇಕು ಎಂದು ತಿಳಿಸಿದರು.  ಅಧಿಕಾರಿಗಳು ಕಚೇರಿಯಲ್ಲೇ ಸೀಮಿತವಾಗದೆ ಅಗತ್ಯವಿದ್ದಲ್ಲಿ ಸ್ಥಳ ಪರೀಶೀಲನೆ ನಡೆಸಬೇಕು. ಉಪವಿಭಾಗ ಮಟ್ಟದಲ್ಲಿ ನಿಯಮಿತ ಸಭೆಗಳನ್ನು ನಡೆಸಿ ಕಂದಾಯ ಇಲಾಖೆಯ ಕಾರ್ಯಕ್ಷಮತೆಯನ್ನು ಹೆಚ್ಚಿಸಬೇಕು ಎಂದರು.  

ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಬೇಕು. ಅರ್ಚಕರು, ಸಿಬ್ಬಂದಿ ಹಾಗೂ ತಹಶೀಲ್ದಾರರು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ​‍್ಕವಾಗಿ ನಿರ್ವಹಿಸಬೇಕು. ದೇವಸ್ಥಾನಗಳ ಆಸ್ತಿ ಹಾಗೂ ಸೇವೆಗಳ ದಾಖಲೆಗಳನ್ನು ಆಧಾರ್ ಮತ್ತು ಆರ್ಟಿಸಿ (ಖಖಿಅ) ಮಾಹಿತಿಯೊಂದಿಗೆ ನವೀಕರಿಸುವಂತೆ ಸೂಚಿಸಿದರು.  

ದೇವಸ್ಥಾನಗಳಲ್ಲಿ ಸಿಸಿಟಿವಿ ಅಳವಡಿಕೆ, ಆದಾಯ-ವೆಚ್ಚದ ಲೆಕ್ಕಪತ್ರಗಳ ನಿಯಮಿತ ಪರೀಶೀಲನೆ ಹಾಗೂ ಪಾರದರ್ಶಕ ನಿರ್ವಹಣೆಗೆ ಒತ್ತು ನೀಡುವಂತೆ ಅವರು ನಿರ್ದೇಶನ ನೀಡಿದರು.  ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಸಿ.ಎನ್‌. ಶ್ರೀಧರ್, ಭೂ ಕಂದಾಯ ಪ್ರಕರಣಗಳು, ಖಾತೆ ಬದಲಾವಣೆ, ಸಾರ್ವಜನಿಕ ಅರ್ಜಿಗಳ ವಿಲೇವಾರಿ ಸೇರಿದಂತೆ ಗ್ರಾಮ ಮಟ್ಟದ ಸಮಸ್ಯೆಗಳಿಗೆ ಆದ್ಯತೆ ನೀಡಿ ತ್ವರಿತ ಪರಿಹಾರ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಎಸ್ಸಿ/ಎಸ್ಟಿ ವಿದ್ಯಾರ್ಥಿಗಳಿಗಾಗಿ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೂ ಒತ್ತು ನೀಡಿದರು.  

ಜಿಲ್ಲೆಯ ವಿವಿಧ ತಾಲೂಕುಗಳ ಮುಜರಾಯಿ ದೇವಸ್ಥಾನಗಳ ಪ್ರಸ್ತುತ ಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಯಿತು. ಜಿಲ್ಲೆಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಆದ್ಯತೆಯಿಂದ ಬಗೆಹರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಯಿತು.  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರ್ಗೇಶ್ ಕೆ.ಆರ್‌., ಉಪವಿಭಾಗಾಧಿಕಾರಿ ಗಂಗಪ್ಪ ಎಂ., ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸನಗೌಡ ಕೊಟೂರು, ವಿವಿಧ ತಾಲೂಕುಗಳ ತಹಶೀಲ್ದಾರರು, ಮುಜರಾಯಿ ಇಲಾಖೆ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.