ಕಾಕತಿ ರಾಣಿ ಚೆನ್ನಮ್ಮಳ ಕೋಟೆ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳಿಂದ ಸ್ವಚ್ಛತಾ ಕಾರ್ಯ

ಕಾಕತಿ ರಾಣಿ ಚೆನ್ನಮ್ಮಳ ಕೋಟೆ ಆವರಣದಲ್ಲಿ ಆರ್‌ಸಿಬಿ ಅಭಿಮಾನಿಗಳಿಂದ ಸ್ವಚ್ಛತಾ ಕಾರ್ಯ RCB fans clean up the premises of Kakati Rani Chennammala Fort

ಬೆಳಗಾವಿ 05: ಐಪಿಎಲ್ ಹಂಗಾಮಿನ ನಡುವೆ ಕ್ರಿಕೆಟ್ ಅಭಿಮಾನಿಗಳು ಸಾಮಾಜಿಕ ಜವಾಬ್ದಾರಿಯತ್ತ ಗಮನ ಹರಿಸಿರುವುದು ಗಮನಾರ್ಹವಾಗಿದೆ. ನಗರದ ಇತಿಹಾಸ ಪ್ರಸಿದ್ಧ ಕಾಕತಿಯಲ್ಲಿರುವ ರಾಣಿ ಚೆನ್ನಮ್ಮಳ ಕೋಟೆ ಆವರಣದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರಿ​‍್ಸಬಿ) ಅಭಿಮಾನಿಗಳು ಸ್ವಚ್ಛತಾ ಕಾರ್ಯ ನಡೆಸಿ ಮಾದರಿ ಕಾರ್ಯಕ್ಕೆ ಮುಂದಾದರು.  

ಕೋಟೆ ಆವರಣದಲ್ಲಿ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ತೆರವುಗೊಳಿಸಿ, ಪರಿಸರವನ್ನು ಶುದ್ಧಗೊಳಿಸಿದರು. ಕೈಯಲ್ಲಿ ಪೊರಕೆ ಮತ್ತು ಕಸದ ಚೀಲಗಳನ್ನು ಹಿಡಿದು ಯುವಕರು ಸ್ವಯಂಪ್ರೇರಿತವಾಗಿ ಕಾರ್ಯನಿರ್ವಹಿಸಿದರು.  

ಈ ವೇಳೆ ಮಾತನಾಡಿದ ಅಭಿಮಾನಿಗಳು, “ನಾವು ಕೇವಲ ಕ್ರಿಕೆಟ್ ಪ್ರಿಯರಲ್ಲ, ನಮ್ಮ ಇತಿಹಾಸ ಮತ್ತು ಪರಂಪರೆಯನ್ನು ಕಾಪಾಡುವುದು ನಮ್ಮ ಕರ್ತವ್ಯ” ಎಂದು ತಿಳಿಸಿದರು. ಅಲ್ಲದೆ ಇತ್ತೀಚೆಗೆ ರಾಣಿ ಚೆನ್ನಮ್ಮಳ ಕೋಟೆ ಆವರಣದಲ್ಲಿ ಪುಂಡ ಪೋಕರಿಗಳು, ಮೋಜು ಮಜಾ ಮಾಡುತ್ತಿರುವುದು ಕಂಡು ಬರುತ್ತಿದೆ. ರಾಣಿ ಚೆನ್ನಮ್ಮ ನಮ್ಮೆಲ್ಲರ ಹೆಮ್ಮೆ. ಇಲ್ಲಿ ಯಾವದೇ ರೀತಿಯ ತಪ್ಪುಗಳು ನಡೆಯಬಾರದು. ಕೋಟೆಯನ್ನು ಸಂರಕ್ಷಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು. ತಮಗಿರುವ ಭಾನುವಾರದ ರಜೆಯನ್ನು ವ್ಯರ್ಥಗೊಳಿಸದೆ ಆರಿ​‍್ಸಬಿ ಅಭಿಮಾನಿಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.  

ಸ್ವಚ್ಛ ಭಾರತ ಅಭಿಯಾನಕ್ಕೆ ಬೆಂಬಲವಾಗಿ ಇಂತಹ ಕಾರ್ಯಗಳು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿವೆ. ಆರ್ ಸಿ ಬಿ ಅಭಿಮಾನಿಗಳು ಕೇವಲ ಮನೋರಂಜನೆ ಮಾತ್ರವಲ್ಲದೆ ಸಾಮಾಜಿಕ ಕೆಲಸಗಳಲ್ಲಿ ಕೂಡ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಆರ್ ಸಿ ಬಿ ಫ್ಯಾನ್ಸ್‌ ಬೆಳಗಾವಿಯ ಸದಸ್ಯರಾದ ಕಿರಣ ಮಾಳನ್ನವರ, ಸೌರಭ ಪಾಟೀಲ್, ಚೇತನ ಪಾಟೀಲ್, ರಾಘವೇಂದ್ರ ತಳವಾರ, ಶಿವರಾಜ್ ಮುರುಡಿ, ಓಂಕಾರ ಹಾಗೂ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು.