ವಿಜಯಪುರ ಜಿಲ್ಲೆಗೆ 371(ಜೆ) ಸೇರೆ​‍್ಡಗೆ ಆಗ್ರಹಿಸಿ ಆಲಮೇಲದಲ್ಲಿ ಹೋರಾಟ

ವಿಜಯಪುರ ಜಿಲ್ಲೆಗೆ 371(ಜೆ) ಸೇರೆ​‍್ಡಗೆ ಆಗ್ರಹಿಸಿ ಆಲಮೇಲದಲ್ಲಿ ಹೋರಾಟ  Protest in Alamela demanding the inclusion of Vijayapura district under Article 371(J)

ಆಲಮೇಲ  21: ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿ ವ್ಯಾಪ್ತಿಗೆ ಸೇರೆ​‍್ಡ ಮಾಡಬೇಕು ಎಂದು ಆಗ್ರಹಿಸಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿ ಹಾಗೂ ಕರ್ನಾಟಕ ರಾಜ್ಯ ಅಂಗವಿಕಲರ ಮತ್ತು ಪಾಲಕರ ಒಕ್ಕೂಟದ ಮುಖಂಡರು ಆಲಮೇಲ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ವಿನೋದ ಖೇಡ ಮಾತನಾಡಿ, 371(ಜೆ) ಮೀಸಲಾತಿಯಿಂದ ವಿಜಯಪುರ ಜಿಲ್ಲೆಯನ್ನು ಕೈಬಿಟ್ಟಿರುವುದರಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಶಿಕ್ಷಣದಲ್ಲಿ ಹಾಗೂ ಯುವಕರಿಗೆ ಸರ್ಕಾರಿ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ. ಈ ಅನ್ಯಾಯ ಸರಿಪಡಿಸಲು ರಾಜ್ಯ ಸರ್ಕಾರ ಕೂಡಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಜಿಲ್ಲೆಯ ಜನರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.  

ಹೋರಾಟಗಾರರಾದ ಮಲ್ಲನಗೌಡ ಪಾಟೀಲ (ಬರಟಗಿ) ಹಾಗೂ ಅನಿಲ ಇಕ್ಕಡೆ ಮಾತನಾಡಿ, ಮೀಸಲಾತಿ ಸೌಲಭ್ಯದಿಂದ ಜಿಲ್ಲೆ ಹೊರಗುಳಿದಿರುವುದರಿಂದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಶಿಕ್ಷಣ ಪಡೆದ ಯುವಕರಿಗೆ ಉದ್ಯೋಗಾವಕಾಶಗಳು ದೊರೆಯದೆ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ವಿಜಯಪುರ ಜಿಲ್ಲೆಯನ್ನು 371(ಜೆ) ವ್ಯಾಪ್ತಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.  

ಹೋರಾಟಗಾರ ಲಾಯಪ್ಪ ಇಂಗಳೆ ಮಾತನಾಡಿ, ಹೈದರಾಬಾದ್ ವಿಮೋಚನಾ ಚಳವಳಿಗೆ ನೇತೃತ್ವ ವಹಿಸಿದ್ದ ಸಿಂದಗಿಯ ಸ್ವಾಮಿ ರಾಮಾನಂದ ತೀರ್ಥರ ತವರು ವಿಜಯಪುರ ಜಿಲ್ಲೆಯನ್ನು 371(ಜೆ) ಮೀಸಲಾತಿಯಿಂದ ಯಾವ ಕಾರಣಕ್ಕೆ ಕೈಬಿಡಲಾಗಿದೆ ಎಂದು ಪ್ರಶ್ನಿಸಿದರು.

ಹೈಕೋರ್ಟ, ಸಾರಿಗೆ, ಪುರಾತತ್ವ ಇಲಾಖೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ ಹಾಗೂ ಕೃಷ್ಣಾ ಕಾಡಾ ಸೇರಿದಂತೆ ಹಲವು ಸಂಸ್ಥೆಗಳು ಕಲ್ಯಾಣ ಕರ್ನಾಟಕದ ಜಿಲ್ಲೆಗಳೊಂದಿಗೆ ಹೊಂದಾಣಿಕೆ ಹೊಂದಿವೆ.

ಹೀಗಾಗಿ ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ವಿಜಯಪುರ ಜಿಲ್ಲೆಗೂ 371(ಜೆ) ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದರು.  ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಮುಖಂಡ ಅಶೋಕ ವಾಲಿಕಾರ ಹಾಗೂ ತಾಲೂಕು ಅಧ್ಯಕ್ಷ ಸಿದ್ದರಾಮ ಕಲ್ಲೂರ ಮಾತನಾಡಿ,

ಜಿಲ್ಲೆಯ ವಿದ್ಯಾರ್ಥಿಗಳು ಮತ್ತು ಯುವಕರಿಗೆ ಶಿಕ್ಷಣ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಆಗುತ್ತಿರುವ ಅನ್ಯಾಯ ತಡೆಯಲು ಜಿಲ್ಲೆಯ ಸಚಿವರು ಮತ್ತು ಶಾಸಕರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಆಗ್ರಹಿಸಿದರು.  

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ 371(ಜೆ) ಹೋರಾಟ ಸಮಿತಿಯ ಎನ್‌. ಸುರೇಶಕುಮಾರ, ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ನಿಂಗರಾಜ ಬಿಸನಾಳ, ಬಂದೇನವಾಜ ಕಲ್ಲೂರ, ಸಾಯಬಣ್ಣ ಪೂಜಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.