ಪಟ್ಟಣದಲ್ಲಿ ಅನಧಿಕೃತ ಗೂಡಂಗಡಿಗಳ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಪಟ್ಟಣದಲ್ಲಿ ಅನಧಿಕೃತ ಗೂಡಂಗಡಿಗಳ ತೆರವಿಗೆ ಆಗ್ರಹಿಸಿ ಪ್ರತಿಭಟನೆ  Protest demanding the removal of unauthorized kiosks in the town


ಬ್ಯಾಡಗಿ 25 : ಪಟ್ಟಣದಲ್ಲಿ ಇತ್ತೀಚಿನ ದಿನಗಳಲ್ಲಿ ಸಂಭವಿಸುತ್ತಿರುವ ಅಪಘಾತಗಳಿಗೆ ರಸ್ತೆ ಬದಿಯಲ್ಲಿ ತಲೆ ಎತ್ತಿರುವ ಅನಧಿಕೃತ ಗುಡಂಗಡಿಗಳೇ ಪ್ರಮುಖ ಕಾರಣವಾಗಿವೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣಕುಮಾರ್ ಶೆಟ್ಟಿ ಬಣದ ಸದಸ್ಯರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.  

ಪಟ್ಟಣದ ಛತ್ರ ಕ್ರಾಸ್ ಬಳಿ ನಾಲ್ಕು ದಿನಗಳ ಹಿಂದೆ ಎರಡು ಬೈಕ್ಗಳ ನಡುವೆ ಡಿಕ್ಕಿ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ಸೇರಿದಂತೆ, ವಿವಿಧ ಕ್ರಾಸ್ಗಳ ಬಳಿ ಪದೇಪದೇ ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಬದಿಯಲ್ಲಿ ನಿರ್ಮಿಸಿರುವ ಗುಡಂಗಡಿಗಳಿಂದ ಎದುರಿನಿಂದ ಬರುವ ವಾಹನಗಳು ಕಾಣದೆ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ದೂರಿದರು.  

ಪಟ್ಟಣದ ವಿವಿಧ ಕ್ರಾಸ್ಗಳ ಬಳಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಗುಡಂಗಡಿಗಳನ್ನು ಕೂಡಲೇ ತೆರವುಗೊಳಿಸಬೇಕು. ಅಪಘಾತ ಸಂಭವಿಸುವ ಸಾಧ್ಯತೆ ಇರುವ ಸ್ಥಳಗಳನ್ನು ಗುರುತಿಸಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು. ಕ್ರಾಸ್ಗಳ ಬಳಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳ ವಿರುದ್ಧ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.  

ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಹಲವು ಕಟ್ಟಡಗಳು ಖಾಲಿ ಬಿದ್ದಿದ್ದರೂ ಅವುಗಳನ್ನು ಬಾಡಿಗೆಗೆ ನೀಡುವ ಬದಲು ರಸ್ತೆ ಹಾಗೂ ಅಪಘಾತ ಸ್ಥಳಗಳ ಬಳಿಯೇ ಗುಡಂಗಡಿಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರ ಜೊತೆಗೆ ಅಪಘಾತಗಳಿಗೂ ಕಾರಣವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.  

ಪುರಸಭೆ ಹಾಗೂ ತಾಲೂಕು ಆಡಳಿತಾಧಿಕಾರಿಗಳು ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಗುಡಂಗಡಿಗಳನ್ನು ಕೂಡಲೇ ತೆರವುಗೊಳಿಸಿ, ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.  

ನಂತರ ಪ್ರತಿಭಟನಾಕಾರರು ತಹಶೀಲ್ದಾರ್ ಚಂದ್ರಶೇಖರ ನಾಯಕ್ ಅವರಿಗೆ ಮನವಿ ಸಲ್ಲಿಸಿ, ತಮ್ಮ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.  

ಪ್ರತಿಭಟನೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ಕಟ್ಟಿಮನಿ, ತಾಲೂಕು ಉಪಾಧ್ಯಕ್ಷ ಕರೇಗೌಡ್ರು, ದ್ಯಾವಣ್ಣ ಮಲ್ಲನಾಳ, ಮಾಲತೇಶ ಜಿಕೆ, ಶಿವಲೀಲಾ ಗೊಂಡಬಾಳ, ಲಕ್ಷ್ಮೀ ಗಂಗಮ್ಮನವರ್, ಸಂತೋಷ ಹಿರೇಯಕ್ಕನವರ್, ರೇಣುಕಾ ಮಾಣಿಗೇರ, ಸಿದ್ದಯ್ಯ ಲೋಣಿಮಠ ಸೇರಿದಂತೆ ಹಲವರು ಕಾರ್ಯಕರ್ತರು ಉಪಸ್ಥಿತರಿದ್ದರು.